ಮಡಿಕೇರಿ, ನ. 15: ಕನಕಪುರದಿಂದ ಮಡಿಕೇರಿಗೆ ಪ್ರವಾಸ ಬಂದಿದ್ದ ಸ್ನೇಹಿತರ ವಾಹನವೊಂದು ಹಿಂತೆರಳುತ್ತಿದ್ದ ಸಂದರ್ಭ ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ತಿರುವೊಂದರಲ್ಲಿ ಬೇರೊಂದು ವಾಹನಕ್ಕೆ ಮಾರ್ಗ ಕಲ್ಪಿಸುವ ವೇಳೆ ಚಾಲಕನ ಹತೋಟಿ ತಪ್ಪಿ ಮಗುಚಿಕೊಂಡ ಪರಿಣಾಮ ಮರಣಪಟ್ಟ ದುರ್ಘಟನೆ ಸಂಭವಿಸಿದೆ. ಕನಕಪುರ ನಿವಾಸಿ ವೀರಭದ್ರಗೌಡ ಹಾಗೂ ಮಾದೇವಮ್ಮ ದಂಪತಿಯ ಏಕೈಕ ಪುತ್ರ ಕಾಳೇಗೌಡ (42) ಎಂಬವರೇ ಮೃತ ದುರ್ದೈವಿ.ಕಾಳೇಗೌಡ ಹಾಗೂ ಸ್ನೇಹಿತರಾದ ಶ್ರೀನಿವಾಸರಾಜ್, ರಮೇಶ್, ಶಂಕರ, ಸ್ವಾಮಿ, ಪ್ರಸನ್ನ ಇವರುಗಳು ನಿನ್ನೆ ಕೊಡಗಿಗೆ ಬಂದಿದ್ದು, ಇಂದು ಸಂಜೆ ಮಡಿಕೇರಿಯಿಂದ ಹಿಂತೆರಳುವಾಗ ಕೊಡಗರಹಳ್ಳಿ ತಿರುವಿನಲ್ಲಿ ಎದುರಿನಿಂದ ಲಾರಿಯೊಂದು ಬಂದಿದೆ. ಈ ವೇಳೆ ಹಠಾತ್ ಕಾಳೇಗೌಡ ಚಾಲಿಸುತ್ತಿದ್ದ ವಾಹನವನ್ನು (ಮಾರುತಿ ಎರಿಟಿಗ ಕೆಎ05-ಎಂ9568) ಎಡಕ್ಕೆ ಚಾಲಿಸುವಷ್ಟರಲ್ಲಿ ಹತೋಟಿ ತಪ್ಪಿ ಮಗುಚಿಕೊಂಡಿದೆ.

ಪರಿಣಾಮ ತೀವ್ರ ಗಾಯ ಗೊಂಡಿದ್ದ ಕಾಳೇಗೌಡ ಹಾಗೂ ಶಂಕರ್ ಎಂಬವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ,

(ಮೊದಲ ಪುಟದಿಂದ) ಕಾಳೇಗೌಡ ಕೊನೆಯುಸಿ ರೆಳೆದಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಶಂಕರ್ ಅವರನ್ನು ಮೈಸೂರಿಗೆ ಕರೆದೊಯ್ದಿದ್ದು, ಇತರರು ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕನಕಪುರ ಯುವ ಕಾಂಗ್ರೆಸ್ ಮುಖಂಡರಾಗಿದ್ದ ಮೃತರು, ಪತ್ನಿ ಸರೋಜ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ದುರ್ಘಟನೆ ಬಗ್ಗೆ ಸ್ನೇಹಿತರು ಕುಟುಂಬ ವರ್ಗಕ್ಕೆ ವಿಷಯ ಮುಟ್ಟಿಸಿದ್ದು, ಜಿಲ್ಲಾ ಆಸ್ಪತ್ರೆಯ ಶವಾಗಾರದಲಿ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ತಾ. 16ರಂದು (ಇಂದು) ಮರಣೋತ್ತರ ಪರೀಕ್ಷೆ ಬಳಿಕ ಹುಟ್ಟೂರಿಗೆ ಕೊಂಡೊಯ್ಯಲಾಗುವದು ಎಂದು ಮೃತರ ಸ್ನೇಹಿತ ಶ್ರೀನಿವಾಸರಾಜ್ ‘ಶಕ್ತಿ’ಗೆ ತಿಳಿಸಿದ್ದಾರೆ. ಮೃತ ಕಾಳೇಗೌಡ ಸಚಿವ ಡಿ.ಕೆ. ಶಿವಕುಮಾರ್ ಆಪ್ತರೆಂದು ದುಃಖ ವ್ಯಕ್ತಪಡಿಸಿದರು.

ಈ ಸಂಬಂಧ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.