ಮಡಿಕೇರಿ, ನ.15 : ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ಸಂಬಂಧಿಸಿ ದಂತೆ ಅನುದಾನದ ವಿಚಾರದಲ್ಲಿ ಉಂಟಾಗಿರುವ ವಿವಾದದ ಕುರಿತು ಸ್ಪಷ್ಟೀಕರಣ ನೀಡಿರುವ ಬಿದ್ದಾಟಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಅನುದಾನ ಬಿಡುಗಡೆಯಾಗದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಬಿ.ಎಸ್.ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ಹೇಳಿಕೆ ಖಂಡನೀಯವೆಂದು ಅವರು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಚಂಗಪ್ಪ, ಬಿದ್ದಾಟಂಡ ಹಾಕಿ ಉತ್ಸವಕ್ಕೆ ಶಾಸಕ ಕೆ.ಜಿ. ಬೋಪಯ್ಯ ಸಾಕಷ್ಟು ಸಹಕಾರವನ್ನು ನೀಡಿದ್ದು, ಬಿ.ಎಸ್.ತಮ್ಮಯ್ಯ ಹಾಗೂ ವೀಣಾ ಅಚ್ಚಯ್ಯ ಅವರು ವಿನಾಕಾರಣ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಕಿ ಹಬ್ಬವು ಸುಮಾರು 1.20 ಕೋಟಿ ರೂ. ಅಧಿಕ ವೆಚ್ಚದಲ್ಲಿ ನಡೆದಿದ್ದು, ರಾಜ್ಯ ಸರ್ಕಾರದಿಂದ ಉಸ್ತುವಾರಿ ಸಚಿವರು ನೀಡಿದ ಭರವಸೆಯಂತೆ 40 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಹಣ ಬಿಡುಗಡೆ ಯಾಗಿಲ್ಲವೆಂದು ತಿಳಿಸಿದರು.

2017 ನವೆಂಬರ್ 7 ರಂದು ಸರ್ಕಾರ 5 ಲಕ್ಷ ರೂ. ಮಂಜೂರಾತಿಗೆ ಆದೇಶ ನೀಡಿದೆಯಷ್ಟೆ ಎಂದು ಅಸಮಾಧಾನ ವ್ಯಕ್ತÀಪಡಿಸಿದರು. ವೀಣಾ ಅಚ್ಚಯ್ಯ ಹಾಗೂ ಬಿ.ಎಸ್.ತಮ್ಮಯ್ಯ ಅವರುಗಳು ಶಾಸಕ ಕೆ.ಜಿ.ಬೋಪಯ್ಯ ಅವರ ವಿರುದ್ಧ ಅನಗತ್ಯ ಟೀಕೆ ಮಾಡಿದ್ದಾರೆ. (ಮೊದಲ ಪುಟದಿಂದ) 40 ಲಕ್ಷ ರೂ.ಗಳ ಅನುದಾನದ ನಿರೀಕ್ಷೆಯಲ್ಲಿದ್ದ ಬಿದ್ದಾಟಂಡ ಕುಟುಂಬ ಕೇವಲ 5 ಲಕ್ಷ ಮಂಜೂರು ಮಾಡಿರುವ ಸರ್ಕಾರದ ಆದೇಶವನ್ನು ಕೆ.ಜಿ.ಬೋಪಯ್ಯ ಅವರ ಗಮನಕ್ಕೆ ತಂದಿತ್ತು. ಇದನ್ನು ಪರಿಶೀಲಿಸಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆಯೇ ಹೊರತು ಇದರಲ್ಲಿ ಯಾವದೇ ರಾಜಕೀಯ ಇಲ್ಲವೆಂದು ಸ್ಪಷ್ಟಪಡಿಸಿದರು.

ವೀಣಾ ಅಚ್ಚಯ್ಯ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಸರ್ಕಾರದ ಅನುದಾನ ಬಿಡುಗಡೆಗೂ ಲೆಕ್ಕಪರಿಶೀಲನಾ ವರದಿಗೂ ಯಾವದೇ ಸಂಬಂಧವಿಲ್ಲವೆಂದು ರಮೇಶ್ ಚಂಗಪ್ಪ ತಿಳಿಸಿದರು. ಪ್ರತಿವರ್ಷ ಸರ್ಕಾರ ಹಾಕಿ ಹಬ್ಬ ಆರಂಭಕ್ಕೂ ಮೊದಲೆ ಶೇ.50ಕ್ಕಿಂತ ಅಧಿಕ ಅನುದಾನವನ್ನು ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಬಾರಿ ಯಾವದೇ ಅನುದಾನ ಬಿಡುಗಡೆಯಾಗಿಲ್ಲ. ಬೋಪಯ್ಯ ಅವರು ಹಾಕಿ ಹಬ್ಬ ಮಾತ್ರವಲ್ಲದೆ ದಸರಾ ಆಚರಣೆÉಗೂ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬಿದ್ದಾಟಂಡ ಕಪ್ ಹಾಕಿ ಉತ್ಸವ ನಡೆದು 8 ತಿಂಗಳು ಕಳೆದಿದ್ದರೂ ಬಿದ್ದಾಟಂಡ ಕುಟುಂಬಸ್ಥರಾದ ಬಿ.ಎಸ್.ತಮ್ಮಯ್ಯ ಅವರು, ಆಡಳಿತ ಪಕ್ಷದಲ್ಲಿದ್ದರೂ ಅನುದಾನ ಬಿಡುಗಡೆಗೆ ಏಕೆ ಒತ್ತಡ ಹೇರಿಲ್ಲವೆಂದು ಪ್ರಶ್ನಿಸಿದರು.

ಜನರಿಗೆ ತಪ್ಪು ಮಾಹಿತಿ ನೀಡಿರುವದಲ್ಲದೆ, ವೀಣಾಅಚ್ಚಯ್ಯ ಅವರಿಂದಲೂ ಹೇಳಿಕೆ ನೀಡಿಸಿರುವದು ಖಂಡನೀಯವೆಂದು ರಮೇಶ್ ಚಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ ಮಾತನಾಡಿ, ಬಿದ್ದಾಟಂಡ ಹಾಕಿ ಉತ್ಸವದ ಘೋಷಿತ ಅನುದಾನ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿಸಲಾಗದ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಹಾಗೂ ಬಿ.ಎಸ್.ತಮ್ಮಯ್ಯ ಅವರು ವಿನಾಕಾರಣ ವಿವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು. 1997ರಲ್ಲಿ ಆರಂಭಗೊಂಡ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬಕ್ಕೆ 2008ರಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ ಅನುದಾನ ಬಿಡುಗಡೆ ಮಾಡಲು ಪ್ರಾರಂಭಿಸಿತ್ತು. ಆರಂಭದಲ್ಲಿ 5 ಲಕ್ಷವಿದ್ದ ಅನುದಾನ ಇಂದು 40 ಲಕ್ಷ ರೂ.ಗಳವರೆಗೆ ಏರಿಕೆಯಾಗಿದೆ. ಪ್ರತಿವರ್ಷ ಹಾಕಿ ಹಬ್ಬಕ್ಕೆ ನಿಗದಿತ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಬಿದ್ದಾಟಂಡ ಹಾಕಿ ಉತ್ಸವಕ್ಕೆ ಘೋಷಿಸಿರುವ 40 ಲಕ್ಷ ರೂ.ಗಳಲ್ಲಿ ಒಂದು ರೂಪಾಯಿಯನ್ನು ಕೂಡ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೀಣಾ ಅಚ್ಚಯ್ಯ ಹಾಗೂ ಬಿ.ಎಸ್.ತಮ್ಮಯ್ಯ ಅವರು ಸರ್ಕಾರದ ಋಣ ತೀರಿಸುವದಕ್ಕಾಗಿ ಜನರಿಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದು, ರಾಜ್ಯ ಸರ್ಕಾರ ತನ್ನ ಅವಧಿ ಮುಗಿಯುವದರ ಒಳಗೆ 40 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. ಅಧಿವೇಶನದಲ್ಲಿ ಈ ಬಗ್ಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಪ್ರಸ್ತಾಪಿಸಲಿದ್ದು, ವೀಣಾ ಅಚ್ಚಯ್ಯ ಬೆಂಬಲ ನೀಡಲಿ ಎಂದರು.

ರಾಜ್ಯ ಸರ್ಕಾರ ಜಿಲ್ಲೆಗೆ ಘೋಷಿಸಿದ ಒಟ್ಟು 200 ಕೋಟಿ ರೂ. ವಿಶೇಷ ಪ್ಯಾಕೇಜ್‍ನಲ್ಲಿ ಕೇವಲ 41 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಪಕ್ಷದವರು ಚಾಲನೆ ನೀಡುತ್ತಿದ್ದು, ಇದು ಖಂಡನೀಯ. ಎಮ್ಮೆಮಾಡು ಭಾಗದಲ್ಲಿ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್ಸಿಗರು ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಮನು ಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಬಿಜೆÉಪಿ ಅಧ್ಯಕ್ಷ ಅಂಬಿ ಕಾರ್ಯಪ್ಪ, ಯುವ ಬಿಜೆಪಿ ಪ್ರಮುಖ ಮನು ಮಹೇಶ್, ಜಿ.ಪಂ ಸದಸ್ಯ ಮುರುಳಿ ಕರುಂಬಮ್ಮಯ್ಯ ಹಾಗೂ ನಾಪೋಕ್ಲು ಗ್ರಾ.ಪಂ ಸದಸ್ಯ ಎಸ್.ಇ.ಜಗದೀಶ್ ಉಪಸ್ಥಿತರಿದ್ದರು.