ಕೂಡಿಗೆ, ನ. 15: ಹೆಬ್ಬಾಲೆಯಲ್ಲಿ ತಾ. 19 ಮತ್ತು 20 ರಂದು ಶ್ರೀ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯ್ತಿಯ ಸಭಾಂಗಣದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ ಅವರ ಸಮಕ್ಷಮದಲ್ಲಿ ಇಂದು ಶಾಂತಿ ಸಭೆ ನಡೆಯಿತು.
ಸತತ ಮೂರು ದಿನಗಳ ಕಾಲ ನಡೆಯಲಿರುವ ಈ ಜಾತ್ರಾಮಹೋತ್ಸವದಲ್ಲಿ ಗ್ರಾಮದ ಗಡಿಭಾಗದಲ್ಲಿನ ಮೈಸೂರು ಮತ್ತು ಹಾಸನ ಜಿಲ್ಲೆಯ ಗ್ರಾಮಸ್ಥರುಗಳು ಪಾಲ್ಗೊಳ್ಳಲಿದ್ದು, ಈ ಸಂದರ್ಭ ದೇವಾಲಯ ಸಮಿತಿಯವರೊಂದಿಗೆ ಗ್ರಾಮಸ್ಥರು ಸಹ ಸಹಕಾರ ನೀಡಿ, ಶಾಂತಿಯನ್ನು ಕಾಪಾಡಬೇಕು ಎಂದು ಅವರು ಹೇಳಿದರು.
ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಜೆ.ಇ.ಮಹೇಶ್ ಮಾತನಾಡಿ, ಹೆಬ್ಬಾಲೆ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಆಗಿದ್ದು, ಗ್ರಾಮದಲ್ಲಿ ಎಲ್ಲಾ ಧರ್ಮದವರು ವಾಸಿಸುತ್ತಿರುವದರಿಂದ ಎಲ್ಲರೂ ಸೌಹಾರ್ಧ ಮನೋಭಾವದಿಂದ ದೇವಿಯ ಉತ್ಸವದಲ್ಲಿ ತಾರತಮ್ಯ ಎಸಗದೆ ಪೂಜಾ ಕೈಂಕರ್ಯದಲ್ಲಿ ಒಗ್ಗೂಡಿ ಕಾರ್ಯಕ್ರಮ ನೆರವೇರಿಸಬೇಕೆಂದು ಹೇಳಿದರು. ಈ ಸಂದರ್ಭ ಬನಶಂಕರಿ ಅಮ್ಮನವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಎನ್.ಬಸವರಾಜ್ ಸಭೆಗೆ ಜಾತ್ರೋತ್ಸವ ಮತ್ತು ಪೂಜೋತ್ಸವಗಳ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲತಾ ವಹಿಸಿದ್ದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷೆ ಪದ್ಮಮ್ಮ, ಸದಸ್ಯರಾದ ಮಧುಸೂದನ್, ವೆಂಕಟೇಶ್, ಸರೋಜಮ್ಮ, ಕುಶಾಲನಗರ ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಕೇಶ್, ಗ್ರಾಮದ ಮುಖಂಡರುಗಳಾದ ಪ್ರಶಾಂತರೆಡ್ಡಿ, ಚಂದ್ರಶೇಖರ್, ಹುಚ್ಚಪ್ಪ, ಜಗದೀಶ್, ಬಸಪ್ಪ, ರಮೇಶ್ ಇದ್ದರು.