ಸೋಮವಾರಪೇಟೆ, ನ. 15: ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಕ್ರೀಡಾಕೂಟಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ ಎಂದು ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್ ಹೇಳಿದರು.
ತಾಲೂಕು ಯುವ ಒಕ್ಕೂಟ,ಹಾನಗಲ್ಲು ಶೆಟ್ಟಳ್ಳಿಯ ಚಂದ್ರೋದಯ ಯುವಕ ಸಂಘ, ಸರೋವರ ಯುವಕ ಸಂಘ, ಸರಸ್ವತಿ ಯುವತಿ ಮಂಡಳಿ, ಸ್ವ ಸಹಾಯ ಸಂಘ ಇವುಗಳ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಾನಗಲ್ಲು ಶೆಟ್ಟಳ್ಳಿಯ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 27ನೇ ವರ್ಷದ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಕೃಷಿ ಚಟುವಟಿಕೆಗಳಲ್ಲೇ ಮುಳುಗುವ ಗ್ರಾಮೀಣ ಭಾಗದ ಕೃಷಿಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಮನೋಲ್ಲಾಸ ಹೊಂದಬೇಕು.
ಕಳೆದ 27 ವರ್ಷಗಳಿಂದ ನಿರಂತರವಾಗಿ ಕ್ರೀಡಾಕೂಟ ಆಯೋಜಿಸುತ್ತಿರುವದು ಶ್ಲಾಘನೀಯ. ಗ್ರಾಮದಲ್ಲಿರುವ ಸ್ತ್ರೀ ಶಕ್ತಿ ಸಂಘಗಳನ್ನು ನೋಂದಣಿ ಮಾಡಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದರು.
ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಗ್ರಾಮದ ದಾನಿಗಳಾದ ವಿಠಲ್ ಪ್ರೋತ್ಸಾಹಕ ಬಹುಮಾನ ವಿತರಿಸಿದರು. ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ಮಕ್ಕಳಿಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟವನ್ನು ಹಾನಗಲ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಿಥುನ್ ಉದ್ಘಾಟಿಸಿದರು.
ನಂತರ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಸೇರಿದಂತೆ ಇತರ ಆಟೋಟಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಚಂದ್ರೋದಯ ಯುವಕ ಸಂಘದ ಶರತ್‍ಕುಮಾರ್, ಚಂದ್ರಶೇಖರ್, ಆನಂದ್, ಸುರೇಶ್ ಸೇರಿದಂತೆ ಇತರರು ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದರು.