ಮಡಿಕೇರಿ, ನ. 16: ರಾಷ್ಟ್ರದಲ್ಲಿ ಆಹಾರ ವಸ್ತುಗಳಿಗೆ ಸಂಬಂಧಿಸಿದ 8 ಕಾನೂನುಗಳನ್ನು ಕ್ರೋಢಿಕರಿಸಿ, ಜನರಿಗೆ ಸುರಕ್ಷತೆ ಹಾಗೂ ಗುಣಮಟ್ಟ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ -2006 ಹಾಗೂ ಅದರಡಿ ರಚಿಸಲಾಗಿರುವ ನಿಯಮ, ನಿಬಂಧನೆಗಳು 2011, 5 ನೇ ಆಗಸ್ಟ್ 2011 ರಿಂದ ಜಾರಿಗೆ ಬಂದಿರುತ್ತದೆ.
ಈ ಕಾಯ್ದೆಯ ಉದ್ದೇಶವು ಆಹಾರ ಪದಾರ್ಥಗಳ ವ್ಯವಹಾರ ಸ್ಥರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವದಾಗಿದೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದು ಕೊಂಡು, ಮಾನವನ ಸೇವನೆಗೆ ಯೋಗ್ಯವಾದ ಆಹಾರವನ್ನು ಪೂರೈಸುವದು ಈ ಕಾಯ್ದೆಯ ಮೂಲ ಉದ್ದೇಶವಾಗಿರುತ್ತದೆ.
ಈ ಕಾಯ್ದೆಯು ಜನಪರ ವಾಗಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳ ತಯಾರ ಕರು, ಸಂಸ್ಕರಣೆ ಮಾಡುವವರು, ಪ್ಯಾಕ್ ಮಾಡುವವರು, ಸಾಗಣೆದಾರರು, ಸಂಗ್ರಹದಾರರು, ವಿತರಕರು, ಮಾರಾಟದಾರರು ಮತ್ತು ಆಮದುದಾರರು ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ.
ವಾರ್ಷಿಕ ರೂ. 12 ಲಕ್ಷದ ಒಳಗೆ ವ್ಯಾಪಾರ ನಡೆಸುವವರು ಆಹಾರ ನೋಂದಣಿಯನ್ನು ಹಾಗೂ ರೂ. 12 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ನಡೆಸುವವರು ಆಹಾರ ಪರವಾನಗಿ ಪಡೆದುಕೊಳ್ಳಬೇಕಾಗಿದೆ.
ಈ ಕಾಯ್ದೆಯ ಸೆಕ್ಷನ್ 31(1) ಮತ್ತು 2.1.1 ಮತ್ತು 2.1.2 ರ ಅಡಿಯಲ್ಲಿ ಆಹಾರ ವಸ್ತುಗಳ ತಯಾರಕರು, ಸಂಸ್ಕರಣೆ, ಸಾಗಣೆ, ವಿತರಣೆ ಮತ್ತು ಮಾರಾಟದಲ್ಲಿ ನಿರತರಾಗಿರುವವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ನೋಂದಣಿ-ಪರವಾನಗಿ ಪಡೆದಿರಬೇಕು. ಇಲ್ಲವಾದಲ್ಲಿ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ ಇದರ ಉಲ್ಲಂಘನೆಯು 6 ತಿಂಗಳವರೆಗೆ ಸೆರೆವಾಸ ಮತ್ತು ರೂ. 5 ಲಕ್ಷದವರೆಗೆ ದಂಡ ವಿಧಿಸ ಬಹುದಾದ ಅಪರಾಧವಾಗುತ್ತದೆ. ಆಹಾರ ನೋಂದಣಿ ಹಾಗೂ ಪರವಾನಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಜಾರಿಯಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಆಹಾರ ಪದಾರ್ಥಗಳ ವ್ಯವಹಾರಸ್ಥರು ಈ ಸವಲತ್ತನ್ನು ಅಂರ್ತಜಾಲ ತಾಣಗಳಿಂದ ಪಡೆಯಬಹುದಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ತಿಳಿಸಿದ್ದಾರೆ.