ಸಿದ್ದಾಪುರ, ನ. 16: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಲ್ಲಿಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ ಘಟನೆ ಗ್ರಾಮಸಭೆಯಲ್ಲಿ ಕಂಡುಬಂದಿತು.
ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಪದ್ಮಾವತಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ ನೆಲ್ಯಹುದಿಕೇರಿಯ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿನಿಂದ ಅಕ್ರಮವಾಗಿ ಗಾಂಜಾ ಮಾರಾಟವಾಗುತ್ತಿದ್ದು, ಪ್ರೌಢಶಾಲಾ ಮಕ್ಕಳು ಕೂಡ ಇತ್ತೀಚೆಗೆ ಗಾಂಜಾ ವ್ಯಸನಿಗಳಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ಗಾಂಜಾ ಮಾರಾಟದ ಬಗ್ಗೆ ಮಾಹಿತಿ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವದೆಂದರು. ಈಗಾಗಲೇ ಸುಧಾರಿತ ಗಸ್ತು ಪ್ರಾರಂಭವಾಗಿದ್ದು ಗ್ರಾಮಸ್ಥರು ಗಸ್ತು ಪೋಲಿಸರ ಬಳಿ ಸಮಸ್ಯೆಗಳನ್ನು ತಿಳಿಸುವಂತೆ ಸಲಹೆ ನೀಡಿದರು.
ಎನ್.ಕೆ ಸುರೇಶ್ ಮಾತನಾಡಿ ನೆಲ್ಯಹುದಿಕೇರಿ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಅಕ್ರಮ ಮರಳು ಸಾಗಾಟವಾಗುತ್ತಿದ್ದು, ಬಡವರಿಗೆ ಮನೆ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಸರ್ಕಾರವು ಮರಳು ನೀತಿಯನ್ನು ಸಮರ್ಪಕವಾಗಿ ನಿರ್ವಹಿಸಿ ಬಡವರಿಗೆ ಮನೆ ನಿರ್ಮಾಣಕ್ಕೆ ಮರಳು ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಓ.ಎಂ. ಮುಸ್ತಫ ಹಾಗೂ ಶಿಯಾಬ್ ಮಾತನಾಡಿ, ನೆಲ್ಯಹುದಿಕೇರಿ ಗ್ರಾಮದಲ್ಲಿ 60 ಕ್ಕೂ ಅಧಿಕ ಮಂದಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಪಿಂಚಣಿದಾರರಿಗೆ ಪಿಂಚಣಿ ಹಣ ಸ್ಥಗಿತಗೊಂಡಿದ್ದು, ಜೀವಂತ ಇರುವವರನ್ನು ಸತ್ತು ಹೋಗಿದ್ದಾರೆಂದು ಪಟ್ಟಿ ಮಾಡಿ ಪಿಂಚಣಿ ಹಣ ಬಾರದೇ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ ಎಂದು ಕಂದಾಯ ಇಲಾಖಾಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದಕ್ಕೆ ಉತ್ತರಿಸಿದ ಗ್ರಾಮ ಲೆಕ್ಕಿಗರಾದÀ ಶ್ವೇತಾ ಮಾತನಾಡಿ, ಪಿಂಚಣಿ ಬಾರದವರು ಆಧಾರ್ ಕಾರ್ಡ್ ಜೋಡಣೆ ಮಾಡದ ಹಿನೆÀ್ನಲೆಯಲ್ಲಿ ಸ್ಥಗಿತಗೊಂಡಿರುವದಾಗಿ ಮಾಹಿತಿ ನೀಡಿದರು. ಅಲ್ಲದೇ ಪಿಂಚಣಿ ಹಣ ಬಾರದ ಮಂದಿ ಹೊಸದಾಗಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದರಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಬೆಳೆಗಾರರು ತಮ್ಮ ಹೆಸರು ಹಾಗೂ ಆಧಾರ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಅರಣ್ಯ ಇಲಾಖಾಧಿಕಾರಿ ಅರುಣ್ ಮಾತನಾಡಿ, ಈಗಾಗಲೇ ದೇವರಕಾಡು ಜಾಗವನ್ನು ಹಾಗೂ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಸರ್ಕಾರದ ಆದೇಶದ ಮೇರೆಗೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಹಿನೆÀ್ನಲೆಯಲ್ಲಿ ಬರಡಿಯಲ್ಲಿ ದೇವರುಕಾಡು ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸರ್ವೆ ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ನೀಡಿದಾಗ ಪಿ.ಆರ್. ಭರತ್ ಮಾತನಾಡಿ ಬರಡಿಯಲ್ಲಿ ಬಹುತೇಕ ಮಂದಿ ಕಡುಬಡವರಿದ್ದು ಅವರುಗಳನ್ನು ತೆರವುಗೊಳಿಸದಂತೆ ಮನವಿ ಮಾಡಿಕೊಂಡರು. ಬೆಟ್ಟದ ಕಾಡು ನಿವಾಸಿಗಳು ಮಾತನಾಡಿ ಕಾಡಾನೆಗಳನ್ನು ಅರಣ್ಯ ಇಲಾಖೆಯ ವರು ತೋಟದಿಂದ ಅಟ್ಟುತ್ತಿದ್ದು ಅದು ಮರಳಿ ಬರುತ್ತಿದ್ದು ಶಾಶ್ವತ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿದರು.
ನೆಲ್ಯಹುದಿಕೇರಿ ಆಟೋ ಚಾಲಕರು ಮಾತನಾಡಿ ನೆಲ್ಯಹುದಿಕೇರಿ ಯಿಂದ ಸಿದ್ದಾಪುರಕ್ಕೆ ರಿಕ್ಷಾಗಳು ಟ್ರಿಪ್ ತೆರಳುತ್ತಿದ್ದು, ಪೋಲಿಸ್ ಇಲಾಖೆಯಿಂದ ಟ್ರಿಪ್ ನಿಷೇದಿಸ ಲಾಗಿದೆ. ಇದರಿಂದಾಗಿ ಆಟೋ ಚಾಲಕರಿಗೆ ಕೆಲಸ ಕಡಿಮೆಯಾಗಿ ಸಮಸ್ಯೆಯಾಗಿದೆ ಎಂದು ತಿಳಿಸಿದರು. ಇದನ್ನು ಬದಲಾಯಿಸಿ ಟ್ರಿಪ್ಗೆ ಅವಕಾಶ ನೀಡುವಂತೆ ಠಾಣಾಧಿಕಾರಿ ಗಳಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹಾದ, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ನೋಡಲ್ ಅಧಿಕಾರಿ ಚಿಟ್ಟಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭ ನೂತನ ಕಾವೇರಿ ತಾಲೂಕು ರಚನೆಯಾಗಬೇಕೆಂದು ಗ್ರಾಮಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.