ಗೋಣಿಕೊಪ್ಪ ವರದಿ, ನ. 16: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಹಾಕಿಕೂರ್ಗ್ ಸಹಯೋಗದಲ್ಲಿ ನಡೆದ 2 ನೇ ವರ್ಷದ ಎಂ. ಎನ್. ಕರುಂಬಯ್ಯ ಜ್ಞಾಪಕಾರ್ಥ ಜಿಲ್ಲಾ ಪ್ರೌಢಶಾಲಾ ಮಟ್ಟದ ಮಾಸ್ಟರ್ಸ್ ಟ್ರೋಫಿಯನ್ನು ಆತಿಥೇಯ ಕಾಲ್ಸ್ ತಂಡ ಮುಡಿಗೇರಿಸಿಕೊಂಡಿದೆ. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಾಲ್ಸ್ ತಂಡವು 6-1 ಗೋಲುಗಳಿಂದ ಕೊಡಗು ವಿದ್ಯಾಲಯ ತಂಡವನ್ನು ಸೋಲಿಸಿತು. ಕಾಲ್ಸ್ ಪರ ಸಿ. ಬಿ. ಪೂವಣ್ಣ ಹಾಗೂ ನಿಖಿಲ್ ತಲಾ 2 ಗೋಲು ಹೊಡೆದರು. 18, 56ರಲ್ಲಿ ಪೂವಣ್ಣ, 27, 28ರಲ್ಲಿ ನಿಖಿಲ್, 49ರಲ್ಲಿ ಕುಶಾಲಪ್ಪ, 15ರಲ್ಲಿ ತಶ್ವಿನ್, ಕೊಡಗು ವಿದ್ಯಾಲಯ ಪರ 58ನೇ ನಿಮಿಷದಲ್ಲಿ ಮಿಲನ್ 1 ಗೋಲು ಹೊಡೆದರು. ಕಾಲ್ಸ್ ತಂಡ ಅಮೋಘ ಪ್ರದರ್ಶನ ನಿಡುವ ಮೂಲಕ ಕಳೆದ ಬಾರಿ ಕೂಡಿಗೆ ಪಾಲಾಗಿದ್ದ ಚಾಂಪಿಯನ್ ಪಟ್ಟವನ್ನು ಕಸಿದುಕೊಂಡಿತು.

ಟೂರ್ನಿಯಲ್ಲಿ 4 ಪಂದ್ಯ ಆಟವಾಡಿ ಹ್ಯಾಟ್ರಿಕ್ ಸೇರಿ 8 ಗೋಲು ಹೊಡೆದ ಕಾಲ್ಸ್‍ನ ಸಿ. ಬಿ. ಪೂವಣ್ಣ ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿ ಪಡೆದುಕೊಂಡರು. ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಅಮ್ಮತ್ತಿ ಪ್ರೌಢಶಾಲೆ ತಂಡದ ಮಣಿಕಂಠ, ಬೆಸ್ಟ್ ಡಿಫೆಂಡರ್ ಆಗಿ ಕಾಲ್ಸ್‍ನ ದಿಶಾನ್ ಕಾವೇರಪ್ಪ, ಮಿಡ್ ಫೀಲ್ಡರ್ ಆಗಿ ಕೊಡಗು ವಿದ್ಯಾಲಯದ ತಾರಿಕ್ ಸೋಮಣ್ಣ ಪಡೆದುಕೊಂಡರು.

ಚಾಂಪಿಯನ್ ತಂಡಕ್ಕೆ ರೋಲಿಂಗ್ ಟ್ರೋಫಿಯೊಂದಿಗೆ 30 ಸಾವಿರ ನಗದು ನೀಡಲಾಯಿತು. ರನ್ನರ್ ಅಪ್ ತಂಡಕ್ಕೆ 20 ಸಾವಿರ ನಗದು ಬಹುಮಾನ ಟ್ರೋಫಿಯೊಂದಿಗೆ ನೀಡಲಾಯಿತು. ಸ್ಥಳೀಯ ಕ್ರೀಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಉತ್ಸಾಹ ಮೂಡಿಸಿದರು.

ಸಮಾರೋಪ ಸಮಾರಂಭಕ್ಕೆ ಭಾರತ ಹಾಕಿ ತಂಡದ ಮಾಜಿ ಆಟಗಾರ ಬಿ.ಪಿ. ಗೋವಿಂದ ಪಾಲ್ಗೊಂಡಿದ್ದರು. ಯಾವದೇ ಕ್ಷೇತ್ರಗಳಲ್ಲಿ ಬೆಳೆಯಬೇಕಾದರೆ ಗುರಿ ಪ್ರಮುಖವಾಗಿರುತ್ತದೆ. ಉನ್ನತ ಸ್ಥಾನದಲ್ಲಿ ಬೆಳೆಯಲು ಗುರಿ ಸಹಕಾರಿಯಾಗಲಿದೆ ಎಂದು ಅವರು ತಿಳಿ ಹೇಳಿದರು. ಈ ಸಂದರ್ಭ ಟೂರ್ನಿ ಯಶಸ್ವಿಗೆ ಕೈಜೋಡಿಸಿದ ಹಾಕಿ ಕೂರ್ಗ್ ತಾಂತ್ರಿಕ ವರ್ಗಕ್ಕೆ ಜೆರ್ಸಿ ವಿತರಿಸುವ ಮೂಲಕ ಗೌರವಿಸಲಾಯಿತು.

ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್ ನಿರ್ದೇಶಕಿ ಅಶ್ವಿನಿ ನಾಚಪ್ಪ, ಮುಖ್ಯಸ್ಥ ದತ್ತಾ ಕರುಂಬಯ್ಯ, ಪ್ರಾಂಶುಪಾಲೆ ಗೌರಮ್ಮ ನಂಜಪ್ಪ, ಹಾಕಿ ಅಭಿಮಾನಿಗಳಾದ ಮುಕ್ಕಾಟೀರ ರೇಣು ಗಣಪತಿ, ಮಹೇಶ್ ಬಹುಮಾನ ವಿತರಿಸಿದರು.

ಪಂದ್ಯಾವಳಿ ನಿರ್ದೇಶಕರಾಗಿ ಅಂಜಪರವಂಡ ಕುಶಾಲಪ್ಪ, ಅಂಪೈರ್ ಕಮಿಟಿ ವ್ಯವಸ್ಥಾಪಕ ಬೊಳ್ಳಚಂಡ ನಾಣಯ್ಯ, ತಾಂತ್ರಿಕ ವರ್ಗದಲ್ಲಿ ಸುಳ್ಳಿಮಾಡ ಸುಬ್ಬಯ್ಯ, ಅನ್ನಾಡಿಯಂಡ ಪೊನ್ನಣ್ಣ, ಕಾಟುಮಣಿಯಂಡ ಕಾರ್ತಿಕ್, ಮೇರಿಯಂಡ ಅಯ್ಯಣ್ಣ, ಚೋಯಮಾಡಂಡ ಬಿಪಿನ್, ಎಂ. ವಿನೋದ್, ಮುಂಡ್ಯೋಳಂಡ ದರ್ಶನ್ ಹಾಗೂ ಹರಿಣಾಕ್ಷಿ ಕಾರ್ಯನಿರ್ವಹಿಸಿದರು.