ಮಡಿಕೇರಿ, ನ. 16: ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಲಲಿತಾರನ್ನು ಪತ್ತೆ ಹಚ್ಚಿ ನಗರದ ಬಾಲ ಮಂದಿರಕ್ಕೆ ಸೇರಿಸಲಾಗಿದ್ದು, ಈ ಬಾಲಕಿಗೆ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಡಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸಮವಸ್ತ್ರ, ನೋಟ್ ಪುಸ್ತಕ, ಬ್ಯಾಗ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಸುಮಾರು ರೂ. 10 ಸಾವಿರ ವೆಚ್ಚದ ಅಗತ್ಯ ವಸ್ತುಗಳನ್ನು ಲಲಿತಾಳಿಗೆ ನೀಡಲಾಯಿತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಸಲಹೆ ಮಾಡಿದರು.

ಬಾಲ ಕಾರ್ಮಿಕರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಜೊತೆಗೆ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೈಜೋಡಿಸುವಂತೆ ಸೂಚಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಹೆಚ್. ರಾಮಕೃಷ್ಣ, ತಾಲೂಕು ಅಧಿಕಾರಿ ಯತ್ನಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಜ್, ಪ್ರಸನ್ನ, ಸಿರಾಜ್ ಇತರರು ಇದ್ದರು.