ಮಡಿಕೇರಿ, ನ.16: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ನಗರ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 64ನೇ ಅಖಿಲ ಭಾರತ ಸಹಕಾರ ಸಪ್ತಾಹದೊಂದಿಗೆ ಸಹಕಾರಾಭಿವೃದ್ಧಿಗೆ ಶಾಸನವನ್ನು ಸಶಕ್ತಗೊಳಿಸುವ ದಿನಾಚರಣೆ ಮತ್ತು ಕೊಡಗಿನ ಹಿರಿಯ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಇಲ್ಲಿನ ಕೊಡಗು ಸಹಕಾರ ಸಭಾಂಗಣದಲ್ಲಿ ಇಂದು ನಡೆಯಿತು. ಪಕ್ಷಾತೀತವಾಗಿ ಜರುಗಿದ ಸನ್ಮಾನ ಕಾರ್ಯಕ್ರಮಕ್ಕೆ ಹಿರಿಯರು ಪ್ರಶಂಸೆ ವ್ಯಕ್ತಪಡಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳದ ಉಪಾಧ್ಯಕ್ಷರು ಹಾಗೂ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಅಧ್ಯಕ್ಷ ಎಂ.ಬಿ. ದೇವಯ್ಯ ಕೊಡಗು ಜಿಲ್ಲೆಯ ಸಹಕಾರ ಸಂಸ್ಥೆಗಳು ಶೇ.90 ರಿಂದ 95 ರಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸಹಕಾರ ರತ್ನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ವಿಶೇಷವಾಗಿದೆ. ಸಹಕಾರ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು. ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಉತ್ತಮವಾಗಿ

(ಮೊದಲ ಪುಟದಿಂದ) ಕೆಲಸ ನಿರ್ವಹಿಸಿ ಅವ್ಯವಹಾರಗಳು ನಡೆಯದಂತೆ ತಡೆಯುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಹಾಗೂ ಕೊಡಗು ಸಹಕಾರ ಒಕ್ಕೂಟ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕೊಡಗಿನವರು ಅನೇಕರು ದುಡಿದಿದ್ದಾರೆ. ಕೊಡಗು ಸಹಕಾರ ಕ್ಷೇತ್ರದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಬಹುತೇಕ ಸಹಕಾರ ಸಂಸ್ಥೆಗಳು ಲಾಭಾಂಶದಲ್ಲಿ ನಡೆಯುತ್ತಿವೆ ಎಂದು ಹೇಳಿದರು.

ಕರ್ನಾಟಕ ಇನ್ಸ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲೆ ಆರ್.ಎಸ್. ರೇಣುಕ ಮಾತನಾಡಿ ಉತ್ತಮ ಆಡಳಿತದಲ್ಲಿ ಪಾರದರ್ಶಕತೆ, ನ್ಯಾಯಪರತೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೊದಲಾದವು ಅಗತ್ಯವೆನಿಸಿದ್ದು, ಅವು ವಾಸ್ತವಿಕವಾಗಿ ಸಹಕಾರ ತತ್ವದೊಂದಿಗೆ ಬೆಸೆದು ಕೊಂಡಿರುತ್ತವೆ. ಸಹಕಾರಿ ಆಡಳಿತ ಕಾರ್ಪೋರೇಟ್ ಆಡಳಿತದಿಂದ ವಿಭಿನ್ನವಾದುದು. ಸಹಕಾರಿ ಆಡಳಿತ ಸಂಘದ ಸದಸ್ಯರಿಗೆ ಉತ್ತರದಾಯಿ ಯಾಗಿದೆ ಎಂದರು.

ಆಡಳಿತ ಮಂಡಳಿ ನೀತಿ ನಿರೂಪಣೆ ಮಾಡುವಲ್ಲಿ ಇಂದು ಸಾರ್ವತ್ರಿಕ ಡಿಜಿಟಲೀಕರಣದೊಂದಿಗೆ ಸಿಬ್ಬಂದಿ ಅಂತಹ ನೀತಿಯನ್ನು ಜಾರಿಗೊಳಿಸುವಲ್ಲಿ ಬದ್ಧರಾಗಿರಬೇಕು. ಸಹಕಾರ ಕ್ಷೇತ್ರ ಅಭಿವೃದ್ಧಿಗೊಳಿಸಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು ಎಂದರು. ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರ ಸಂಖ್ಯೆಯನ್ನು 21 ಕ್ಕೆ ಸೀಮಿತ ಗೊಳಿಸಲಾಗಿದೆ. ಅಬಲ ವರ್ಗಕ್ಕೆ ಆದ್ಯತೆಯ ಮೇಲೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಮಾಜದ ಎಲ್ಲಾ ವರ್ಗದ ಜನರೂ ಸಹಕಾರಿ ಪ್ರಯತ್ನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುದೀರ್ಘವಾಗಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಲ್ಲಡಿಚಂಡ ಬಿ.ನಾಣಯ್ಯ ಅವರಿಗೆ ಕೊಡಗು ಸಹಕಾರ ರತ್ನ ಹಾಗೂ ಮಾತಂಡ ಎ.ರಮೇಶ್, ಎ.ವಿ.ಶಾಂತಕುಮಾರ್, ಮುಕ್ಕಾಟಿರ ಪ್ರೇಮ ಸೋಮಯ್ಯ ಅವರಿಗೆ ಶ್ರೇಷ್ಠ ಸಹಕಾರಿಗಳು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಪಿ.ನಿಂಗಪ್ಪ, ಯೋಗೇಂದ್ರ ನಾಯಕ್ ಇತರರು ಇದ್ದರು.

ಕೊಡಗು ಸಹಕಾರ ರತ್ನ ಗೌರವ ಸ್ವೀಕರಿಸಿ ಮಾತನಾಡಿದ ಬಲ್ಲಡಿಚಂಡ ನಾಣಯ್ಯ 1962ರಿಂದ 1971ರ ತನಕ ಕೊಡಗು ಸಹಕಾರ ಒಕ್ಕೂಟದ ಸ್ಥಾಪಕ ಉಪಾಧ್ಯಕ್ಷರಾಗಿ ತಮ್ಮ ತಂದೆ ಬಿ.ಪಿ. ಬೋಪಯ್ಯ ಸೇವೆ ಸಲ್ಲಿಸಿದ್ದು, ಅವರ ಪ್ರೇರಣೆ ತಾನು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು ಎಂದರು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಮಾತಂಡ ಎ. ರಮೇಶ್ ಶ್ರೇಷ್ಠ ಸಹಕಾರಿ ಗೌರವ ಸ್ವೀಕರಿಸಿ, ಇಂತಹ ಅಪರೂಪದ ಸಮ್ಮಿಲನ ಹರ್ಷ ತಂದಿದ್ದು, ಸಹಕಾರ ರಂಗದ ಏಳಿಗೆಗೆ ಸ್ಫೂರ್ತಿದಾಯಕ ವೆಂದು ನುಡಿದರಲ್ಲದೆ, ಆಡಳಿತ ಮಂಡಳಿ ಸದಾ ಜಾಗೃತೆ ವಹಿಸಿದರೆ ಉದ್ಯೋಗಿಗಳು ಅವ್ಯವಹಾರ ನಡೆಸದಂತೆ ಸಂಸ್ಥೆಗಳನ್ನು ಕಾಪಾಡಲು ಸಾಧ್ಯವೆಂದು ತಿಳಿ ಹೇಳಿದರು.

ಇನ್ನೋರ್ವ ಸಹಕಾರಿ ಎ.ವಿ. ಶಾಂತಕುಮಾರ್ ಮಾತನಾಡಿ, ತನ್ನ ತಂದೆ ವೀರಪ್ಪ ನಂಜರಾಯಪಟ್ಟಣ ಕೃಷಿ ಪತ್ತಿನ ಸಂಘದ ಬೆಳವಣಿಗೆಗೆ ಶ್ರಮಿಸುವದರೊಂದಿಗೆ ಆ ಹಾದಿಯಲ್ಲಿ ತಾವು ಬರಲು ಸ್ಫೂರ್ತಿಯಾಯಿತು ಎಂದರು. ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಜನತೆಯ ಪರಿಶ್ರಮದಿಂದ ಸಹಕಾರ ರಂಗ ಬಲಿಷ್ಠಗೊಳ್ಳಲಿದೆ ಎಂದು ಅವರು ಹಿತನುಡಿಯಾಡಿದರು. ಹಿರಿಯ ಮಹಿಳಾ ಸಹಕಾರಿ ಮುಕ್ಕಾಟಿರ ಪ್ರೇಮಾ ಸೋಮಯ್ಯ ತಮ್ಮನ್ನು ಗುರುತಿಸಿ ಗೌರವಿಸಿದ್ದಕ್ಕೆ ಶ್ಲಾಘನೆಯ ನುಡಿಯಾಡಿದರು. ಕಿರು ಸಂಕ್ರಮಣ ಹಿನ್ನೆಲೆ ಇನ್ನೋರ್ವ ಹಿರಿಯ ಟಿ.ಎಸ್. ನಾರಾಯಣಾಚಾರ್ ಇಂದು ಸನ್ಮಾನ ಸಮಾರಂಭಕ್ಕೆ ಆಗಮಿಸಿರಲಿಲ್ಲ. ಸನ್ಮಾನಿತರ ಸೇವೆ ಹಾಗೂ ಸಹಕಾರ ಕ್ಷೇತ್ರಕ್ಕೆ ದಶಕಗಳ ಕೊಡುಗೆಯನ್ನು ಅಧ್ಯಕ್ಷ ಮನು ಮುತ್ತಪ್ಪ ಸ್ಮರಿಸುವ ಮೂಲಕ ಅಭಿವಂದಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾರ್ಯಕ್ರಮ ನಿರೂಪಿಸಿ, ಆರ್. ಮಂಜುಳ ಪ್ರಾರ್ಥನೆಯೊಂದಿಗೆ, ಉಪಾಧ್ಯಕ್ಷರು ಸ್ವಾಗತಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ರವಿಕುಮಾರ್ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕ ಕೊಡಪಾಲು ಗಣಪತಿ ವಂದಿಸಿದರು.