ಮಡಿಕೇರಿ, ನ. 16: ಮಂಗಳೂರಿನ ಡಿವೈಎಸ್‍ಪಿ ಕೊಡಗು ಮೂಲದ ಎಂ.ಕೆ. ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಅಧಿಕಾರಿಗಳ ತಂಡ ಮತ್ತೊಂದು ಸುತ್ತಿನ ತನಿಖೆಯೊಂದಿಗೆ ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿರುವದು ದೃಢಪಟ್ಟಿದೆ.ಮೂಲಗಳ ಪ್ರಕಾರ ಮೃತ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಸಹೋದರ ಎಂ.ಕೆ. ಮಾಚಯ್ಯ ಅವರಿಂದ ಇಂದು ಕೂಡ ಪ್ರಮುಖ ಹೇಳಿಕೆಗಳನ್ನು ಪಡೆದಿರುವದಾಗಿ ಗೊತ್ತಾಗಿದೆ.ಅಲ್ಲದೆ ಕಳೆದ ವರ್ಷ ಜುಲೈ 7 ರಂದು ಗಣಪತಿ ಸಾವಿಗೀಡಾದ ಸಂಬಂಧ ನಗರದ ವಿನಾಯಕ ಲಾಡ್ಜ್‍ನ ಮಾಲೀಕ ವಿವೇಕ್ ಕಾಮತ್ ಅವರ ಹೇಳಿಕೆ ನಮೂದಿಸಿ ಕೊಂಡಿರುವ ಸಿಬಿಐ, ವಸತಿ ಗೃಹ ಸಿಬ್ಬಂದಿ ಹೆನ್ರಿ ಡಿಸೋಜ ಎಂಬವರ ಸಾಕ್ಷ್ಯ ಪಡೆದಿರುವದಾಗಿ ಸುಳಿವು ಲಭಿಸಿದೆ.
ಮಾತ್ರವಲ್ಲದೆ, ಗಣಪತಿ ಸಾವಿಗೀಡಾದ ದಿವಸ ಮೃತರ ಪೋಷಕರೊಂದಿಗೆ ಇಲ್ಲಿನ ವಸತಿ ಗೃಹದಲ್ಲಿ ಪೊಲೀಸರು ಪಂಚನಾಮೆ ನಡೆಸುವ ಸಂದರ್ಭ ಅಂದು ಹಾಜರಿದ್ದ ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಅವರಿಂದಲೂ ಇಂದು ಮರು ಹೇಳಿಕೆಯೊಂದಿಗೆ ಸಾಕ್ಷ್ಯ ಪಡೆದಿರುವದಾಗಿ ಖಾತರಿಗೊಂಡಿದೆ.
ಮಡಿಕೇರಿಯ ವಸತಿ ಗೃಹದಲ್ಲಿ ಡಿವೈಎಸ್ಪಿ ಗಣಪತಿ ತಂಗಿದ್ದ ಕೊಠಡಿಗೆ ಎರಡು ದಿನಗಳ ಹಿಂದೆ ಬೀಗ ಹಾಕುವದರೊಂದಿಗೆ ಕೇಂದ್ರ ತನಿಖಾ ದಳದ ಮುದ್ರೆ ಒತ್ತಿರುವ ಅಧಿಕಾರಿಗಳು,
(ಮೊದಲ ಪುಟದಿಂದ) ಮುಂದಿನ ವಿಚಾರಣೆ ತನಕ ಕೊಠಡಿಗೆ ಬೀಗ ಹಾಕಲಾಗಿರುವ ಬಗ್ಗೆ ನಿಗಾವಹಿಸುವಂತೆ ವಸತಿ ಗೃಹ ಮಾಲೀಕರಿಗೆ ಸೂಚಿಸಿರುವದಾಗಿ ತಿಳಿದು ಬಂದಿದೆ.
ನ್ಯಾಯ ನಿರೀಕ್ಷೆ: ಸಿಬಿಐ ವಿಚಾರಣೆ ಸಂಬಂಧ ಮೃತ ಪೊಲೀಸ್ ಅಧಿಕಾರಿಯ ಸಹೋದರ ಎಂ.ಕೆ. ಮಾಚಯ್ಯ ಹಾಗೂ ಇತರರು ಸಾಕ್ಷ್ಯ ನುಡಿಯುವದರೊಂದಿಗೆ, ನ್ಯಾಯ ಲಭಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೃತ ಗಣಪತಿ ಸಾವನ್ನಪ್ಪಿದ ವಸತಿ ಗೃಹದ ಆಸು ಪಾಸು ‘ಚೆಕ್‍ಬಂದಿ’ಗೆ ಸಂಬಂಧಿಸಿದಂತೆ ಪಂಚನಾಮೆಗೆ ಬಂದಿದ್ದಾಗಿ ಅವರು ಅಭಿಪ್ರಾಯ ಹಂಚಿಕೊಂಡರು.
ಅಲ್ಲದೆ ಇದುವರೆಗೆ ನಡೆಸಿರುವ ತನಿಖೆಗೆ ಪೂರಕ ದಾಖಲಾತಿಗಳಿಗೆ ಹಸ್ತಕ್ಷರ ನೀಡಲಷ್ಟೇ ತಾವು ಬಂದಿರುವದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಎಂ.ಕೆ. ಮಾಚಯ್ಯ, ತಾವು ಅಣ್ಣನ ಸಾವಿಗೆ ನ್ಯಾಯ ದೊರಕುವ ಆಶಯ ಹೊಂದಿದ್ದು, ಈ ಸಂದರ್ಭ ಏನನ್ನೂ ಹೇಳಲಾರೆ ಎಂದಷ್ಟೇ ನುಡಿದರು.