ಕೂಡಿಗೆ, ನ. 16: ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕಅಳುವಾರ ಸ್ನಾತಕ್ಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮುಳ್ಳುಸೋಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಣ್ಣ ಉಳಿತಾಯ ಮತ್ತು ಹೂಡಿಕೆ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಉದ್ಘಾಟಿಸಿದರು.
ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕ ಎಂ.ಎಸ್. ನಟರಾಜ್ ಮಾತನಾಡಿ, ಕುಟುಂಬದ ಸದಸ್ಯರು ಗಳಿಸಿದ ಹಣದ ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡುವದರಿಂದ ತಮ್ಮ ಸಂಸಾರಿಕ ಜೀವನ ಸಾಗಿಸಲು ಉಪಯೋಗವಾಗುತ್ತದೆ. ಅಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರಿ ಆಗುವದು.
ಸರಕಾರದಿಂದ ಸಿಗುವ ಸಣ್ಣ ಕೈಗಾರಿಕೆ ಮತ್ತು ಇನ್ನಿತರ ಸೌಲಭ್ಯಗಳನ್ನು ಸಣ್ಣ ಉಳಿತಾಯದ ಮುಖೇನ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಕೆ.ಜೆ. ರಾಬಿನ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿನ ಜನರಿಗೆ ಸಣ್ಣ ಉಳಿತಾಯ ಮತ್ತು ಹೂಡಿಕೆ ಮಾಡುವ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇವುಗಳನ್ನು ಜನರು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘದ ಪ್ರತಿನಿಧಿ ಸುವರ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರಶಿಕ್ಷಣಾರ್ಥಿ ಗಳಾದ ಹೆಚ್.ಆರ್. ಅಶ್ವಿನಿ, ಹೆಚ್.ಎಸ್. ಗಾಯಿತ್ರಿ, ಎಂ.ಎಸ್. ನಿಧೀಶ್, ಎಂ.ಕೆ. ದೇವಯ್ಯ, ಸಿ. ಚೇತನ್, ನಿತ್ಯಶ್ರೀ, ಕೆ.ಬಿ. ಪರಮೇಶಿ ಮತ್ತಿತರರು ಇದ್ದರು.