ಸೋಮವಾರಪೇಟೆ, ನ.16 : ಕಾಫಿ ಪಲ್ಪಿಂಗ್ ತ್ಯಾಜ್ಯದಿಂದ ಜಲಮೂಲಗಳನ್ನು ರಕ್ಷಿಸಬೇಕು. ಕಲುಷಿತ ನೀರನ್ನು ಕೆರೆ, ನದಿ, ತೊರೆಗಳಿಗೆ ಹರಿಸಬಾರದು. ಈ ಬಗ್ಗೆ ಪಲ್ಪಿಂಗ್ ಘಟಕದ ಮಾಲೀಕರು ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಹಮೀದಾ ತಿಳಿಸಿದರು.

ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಬ್ರಹ್ಮಕುಮಾರೀಸ್ ವಿದ್ಯಾಲಯದ ಸುವರ್ಣಧಾಮ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಬೇಕು. ಘಟಕದ ಪಕ್ಕದಲ್ಲೇ ಹೊಂಡ ತೆಗೆದು ಪಲ್ಪಿಂಗ್ ತ್ಯಾಜ್ಯವನ್ನು ಸುಣ್ಣ ಮತ್ತು ಸಗಣಿಯೊಂದಿಗೆ ಹಾಕಿ ಹೆಚ್‍ಡಿಡಿಪಿ ಪ್ಲಾಸ್ಟಿಕ್‍ನಿಂದ ಮುಚ್ಚಿದರೆ ಉತ್ತಮ ಗೊಬ್ಬರ ತಯಾರಿಸಬಹುದು ಎಂದು ಸಲಹೆ ನೀಡಿದ ಅವರು, ಪಲ್ಪಿಂಗ್ ಘಟಕ ಹೊಂದಿರುವವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರಿಸರ ಮಾಲಿನ್ಯ ತಡೆಗಟ್ಟಬೇಕು ಎಂದು ಹಮೀದಾ ಮಾಹಿತಿ ನೀಡಿದರು.

ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕಾಫಿ ಮಂಡಳಿಯಿಂದ ಸಹಾಯ ಧನ ಒದಗಿಸಿಕೊಡುವ ಬಗ್ಗೆ ಮಂಡಳಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗುವದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಹೇಳಿದರು.

ಸಭೆಯಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಸುದೀಪ್, ಉಪಾಧ್ಯಕ್ಷ ಶ್ರೀಕೇಶ್, ಸಲಹೆಗಾರರಾದ ಬಗ್ಗನ ತಮ್ಮಯ್ಯ, ಬಗ್ಗನ ಕುಶಾಲಪ್ಪ ಸೇರಿದಂತೆ ಬೆಳೆಗಾರರು, ಪಲ್ಪಿಂಗ್ ಘಟಕದ ಮಾಲೀಕರು ಉಪಸ್ಥಿತರಿದ್ದರು.