ಮಡಿಕೇರಿ, ನ. 16: ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಸೂಚಿಸಿದ್ದಾರೆ.
ಈ ಬಗ್ಗೆ ಇಂದು ಸದನದಲ್ಲಿ ಶಾಸಕ ಕೆ. ಜಿ ಬೋಪಯ್ಯ ಅವರ ಪ್ರಸ್ತಾವನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಅಲ್ಲದೆ, ಸರಕಾರದ ನಿರ್ದೇಶನವಿದ್ದರೂ, ಭಾಗಮಂಡಲ ಪತ್ತಿನ ಮಹಾಸಭೆಯಲ್ಲಿ ಸಂಬಂಧಪಟ್ಟವರು ಅವಕಾಶ ನೀಡದ ಬಗ್ಗೆ ಶಾಸಕರು ಇಂದು ಸರಕಾರದ ಗಮನ ಸೆಳೆದಿದ್ದರು.
ಸಚಿವರ ಉತ್ತರ: ತಾ. 22-09-2017 ರಂದು ನಡೆದ ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಠರಾವು ಸಂಖ್ಯೆ 32ರನ್ವಯ, ಕುಂದಚೇರಿ ಗ್ರಾಮ ಪಂಚಾಯಿತಿಯಲ್ಲಿ ಹೊಸ ಫ್ಯಾಕ್ಸ್ ಸ್ಥಾಪನೆ ಬಗ್ಗೆ ಚರ್ಚೆ ನಡೆಸಿದ್ದು, ಬಹು ಸಂಖ್ಯೆಯ ಸದಸ್ಯರು ವಿರೋಧ ವ್ಯಕ್ತಪಡಿಸಿರುವದಾಗಿ ಠರಾವಿನಲ್ಲಿ ನಮೂದಿಸಿರುತ್ತಾರೆ.
ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪದಕಲ್ಲು, ಸಿಂಗತ್ತೂರು, ಕುಂದಚೇರಿ, ಚರಂಡೆಟಿ, ಕೋಪಟ್ಟಿ ಗ್ರಾಮಗಳನ್ನು ಸೇರಿಸಿ ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 5 ಕಂದಾಯ ಗ್ರಾಮಗಳು ಸೇರಿದ್ದು, ಭಾಗಮಂಡಲ ಫ್ಯಾಕ್ಸಿನಿಂದ ಅಂದಾಜು 5-6 ಕಿ. ಮೀ ದೂರ ವಿದ್ದು, 2242 ಜನ ಸಂಖ್ಯೆಯನ್ನು ಹೂಂದಿದ್ದು, 974 ಕುಟುಂಬಗಳಿದ್ದು, 2612,41 ಎಕರೆ ಕೃಷಿ ಸಾಗವಳಿ ಭೂಮಿ ಹೊಂದಿರುತ್ತದೆ. ಹಾಗೂ 761 ಸದಸ್ಯರು ಭಾಗಮಂಡಲ ಫ್ಯಾಕ್ಸ್ ಸದಸ್ಯರಾಗಿದ್ದು, ಈ ಪೈಕಿ 328 ಸದಸ್ಯರು ರೂ. 1,91,90 ಲಕ್ಷಗಳಷ್ಟು ಸಾಲವನ್ನು ಪಡೆದಿರುತ್ತಾರೆ. ಆದುದರಿಂದ ಕುಂದಚೇರಿ ಗ್ರಾಮ ಪಂಚಾತಿಯಲ್ಲಿ ಹೊಸ ಫ್ಯಾಕ್ಸ್ ಸ್ಥಾಪನೆ ಮಾಡಿದಲ್ಲಿ ರೂ. 20 ಲಕ್ಷಗಳ ಸಾಲ ವಿತರಿಸುವ ಸಾಮಥ್ರ್ಯ ಬರುವದರಿಂದ, ಹೊಸ ಫ್ಯಾಕ್ಸ್‍ನ್ನು ರಚಿಸಬಹುದಾಗಿರುತ್ತದೆ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಮಿತಿ ಸಭೆಯನ್ನು ಕರೆದು, ಕುಂದಚೇರಿ ಗ್ರಾಮ ಪಂಚಾಯಿತಿಯಲ್ಲಿ ಹೊಸ ಫ್ಯಾಕ್ಸ್‍ನ್ನು ಸ್ಥಾಪನೆ ಮಾಡುವ ಬಗ್ಗೆ ಕೂಡಲೇ ಕ್ರಮವಹಿಸಲು ಸಹಕಾರ ಸಂಘಗಳ ಉಪನಿಬಂಧಕರು, ಕೊಡಗು ಜಿಲ್ಲೆ ಇವರಿಗೆ ದಿನಾಂಕ 9.11.2017ರ ನಿಬಂಧಕರ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಭರವಸೆಯೊಂದಿಗೆ ಲಿಖಿತ ಉತ್ತರ ನೀಡಿದ್ದಾರೆ.