ಮಡಿಕೇರಿ, ನ. 16: ಚಲನಚಿತ್ರೋತ್ಸವ ಸಪ್ತಾಹದ ಪ್ರಯುಕ್ತ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರದರ್ಶನ ತಾ. 17ರಿಂದ 23ರವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದಲ್ಲಿ ನಡೆಯುತ್ತಿರುವದು ಸ್ವಾಗತಾರ್ಹ. ಆದರೆ ಇದರಲ್ಲಿ ಈ ನೆಲದ, ಪ್ರಾದೇಶಿಕ ಭಾಷೆಯಾಗಿರುವ ಕೊಡವ ಭಾಷೆಯ ಚಿತ್ರವನ್ನು ಪರಿಗಣಿಸದೇ ಇರುವದು ವಿಷಾದಕರ ಎಂದು ಅಲ್ಲಾರಂಡ ರಂಗ ಛಾವಡಿಯ ಸಂಚಾಲಕ ಅಲ್ಲಾರಂಡ ವಿಠಲ್ ನಂಜಪ್ಪ ಆಕ್ಷೇಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದ ಮತ್ತೊಂದು ಪ್ರಾದೇಶಿಕ ಭಾಷೆಯಾಗಿರುವ ತುಳು ಭಾಷಾ ಚಿತ್ರಕ್ಕೂ ಅವಕಾಶ ನೀಡಲಾಗಿದೆ. ಈ ಬಗ್ಗೆ ವಿರೋಧವಿಲ್ಲ. ಆದರೆ ಇದೇ ಮಣ್ಣಿನ ಪ್ರಾದೇಶಿಕ ಭಾಷೆಯಾಗಿರುವ ಕೊಡವ ಭಾಷೆಯನ್ನು ನಿರ್ಲಕ್ಷಿ ಸಲಾಗಿದೆ. ಕೊಡವ ಭಾಷೆಯಲ್ಲೂ ಇಂತಹ ಪ್ರಶಸ್ತಿ ಗಳಿಸಿರುವ ಹಲವಾರು ಚಿತ್ರಗಳಿವೆ ಎಂಬದನ್ನು ಆಯೋಜಕರು ಅರಿತುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.