*ಗೋಣಿಕೊಪ್ಪಲು, ನ. 16: ಪೊನ್ನಂಪೇಟೆ ಚೇನಿವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ವಿದ್ಯಾರತ್ನ ಎಜುಕೇಷನ್ ಟ್ರಸ್ಟ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.
ವೀರಾಜಪೇಟೆ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ಸುಮಾರು 150 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಪಾಸಣೆ ನಡೆಸಿದರು. ಶಿಬಿರ ಉದ್ಘಾಟಿಸಿದ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಮಾತನಾಡಿ, ವಿವಿಧ ಬಗೆಯ ಸಿಹಿ ತಿನಿಸುಗಳ ಸೇವೆನೆಯಿಂದ ಹಲ್ಲುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಇವುಗಳ ಆರೋಗ್ಯ ಕಾಪಾಡಿಕೊಳ್ಳಲು ಆಗಾಗ್ಗೆ ತಪಾಸಣೆ ನಡೆಸಿಕೊಳ್ಳುವದು ಒಳ್ಳೆಯದು ಎಂದು ಹೇಳಿದರು. ಡಾ. ಪೂಜಾ ಮಾತನಾಡಿ, ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು. ಎಲ್ಲರೂ ಹಲ್ಲಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ವಿದ್ಯಾರತ್ನ ಎಜುಕೇಷನ್ ಟ್ರಸ್ಟ್ ಸಂಚಾಲಕ ಎಂ.ಆರ್. ಅಕ್ರಂ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸಖೀನಾ, ಮುಖ್ಯ ಶಿಕ್ಷಕಿ ಟಿ.ಕೆ. ಓಮನಾ, ಪೋಷಕರಾದ ಸಾದಿಲಿ, ಮಹಮದ್ ಆಲಿ, ಶಿಕ್ಷಕರಾದ ನಾಗರತ್ನ, ಪುಷ್ಪ, ಶಶಿಕಲಾ, ಮೋನಿಷಾ ಹಾಜರಿದ್ದರು.