ಗೋಣಿಕೊಪ್ಪ ವರದಿ, ನ. 16: ಕೃಷಿ ಇಲಾಖೆಯ ನಿಯಮ ಗಾಳಿಗೆ ತೂರಿ ಅಕ್ರಮವಾಗಿ ಯೂರಿಯ ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ತಡೆ ಹಿಡಿದಿರುವ ಕುಟ್ಟ ಪೊಲೀಸರು ಸಹಕಾರ ಸಂಘದ ನಿಬಂಧಕರು ಹಾಗೂ ಕೃಷಿ ಇಲಾಖೆಗೆ ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿ, ತನಿಖೆಗೆ ಪ್ರಕರಣವನ್ನು ನೀಡಿದ್ದಾರೆ. ಮಂಗಳವಾರ ಸಂಜೆ 4.30 ಗಂಟೆಗೆ ಕುಟ್ಟ ಪೊಲೀಸರು ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ನಡೆಸುವ ಸಂದರ್ಭ ಅಂದಾಜು 60 ಸಾವಿರ ರೂಗಳ ಬೆಲೆಯ 200 ಚೀಲ ಯೂರಿಯ ಸಾಗಿಸುತಿದ್ದ ಲಾರಿಯನ್ನು (ಕೆಎ 12 ಎ 8311) ತಪಾಸಣೆಗೆ ಒಳಪಡಿಸಿದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.

ಕೊಡಗು ಜಿಲ್ಲಾ ಸಹಕಾರ ಮಾರಾಟ ಮಂಡಲ ನಿಯಮಿತ (ಪೆಢರೇಷನ್) ಪೊನ್ನಂಪೇಟೆ ಶಾಖೆಯಿಂದ ಖಾದÀರ್ ಎಂಬವರು ಯೂರಿಯ ಖರೀದಿಸಿ ಗೊಬ್ಬರವನ್ನು ಲಾರಿ ಮುಖಾಂತರ ಸಾಗಾಟಕ್ಕೆ ಪ್ರಯತ್ನಿಸಿದ್ದರು. ಕುಟ್ಟ ಗೇಟ್‍ನಲ್ಲಿ ತಪಾಸಣೆ ನಡೆಸುವಾಗ ಗೊಬ್ಬರ ಸಾಗಿಸುವದು ಪತ್ತೆಯಾಗಿದೆ. ಕೃಷಿ ಇಲಾಖೆಯಿಂದ ಸೂಕ್ತ ವರದಿಗಾಗಿ ಪ್ರಕರಣವನ್ನು ಕಾಯ್ದಿರಿಸಲಾಗಿದೆ.

ಕೃಷಿ ಇಲಾಖೆ ನಿಯಮದಂತೆ ಗೊಬ್ಬರವನ್ನು ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಕೊಂಡ್ಯೊಯುವಂತಿಲ್ಲ. ಆದರೂ ಈ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಕೇರಳಕ್ಕೆ ಸಾಗಿಸುತ್ತಿದ್ದದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಾರ್ವಜನಿಕ ಮೂಲಗಳ ಪ್ರಕಾರ ಪೊನ್ನಂಪೇಟೆ ಶಾಖೆಯಿಂದ ಈಗಾಗಲೇ 14 ಲೋಡ್‍ಗಳಷ್ಟು ಯೂರಿಯ

(ಮೊದಲ ಪುಟದಿಂದ) ಕೇರಳ ರಾಜ್ಯದ ಕೊಚ್ಚಿನ್‍ಗೆ ಸಾಗಾಟವಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರು ಪರೀಶೀಲಿಸಿದ ನಂತರವಷ್ಟ್ಟೆ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗಾಗಲೇ ಪೊಲೀಸ್ ಇಲಾಖೆ ಈ ಬಗ್ಗೆ ಸಹಕಾರ ಸಂಘದ ಜಂಟಿ ನಿರ್ದೇಶಕರಿಗೆ ವಿಚಾರ ತಿಳಿಸಿದ್ದು ಈ ಬಗ್ಗೆ ಇನ್ನಷ್ಟೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಈ ಹಿಂದೆ ಯೂರಿಯವನ್ನು ಸ್ಪೋಟಕ ಹಾಗೂ ಹಾಲಿಗೆ ಮಿಶ್ರಣ ಮಾಡಲು ಉಪಯೋಗಿಸುತಿದ್ದರು. ಆದರೆ ಈಗ ಯೂರಿಯಾ ದರದ ಮೇಲೆ ಬೇವಿನ ಪುಡಿಯನ್ನು ಮಿಶ್ರಣ ಮಾಡುವದರಿಂದ ಕೃಷಿಗಷ್ಟೇ ಉಪಯೋಗಿಸಲು ಅರ್ಹವಾಗಿರುತ್ತದೆ. ಆದರೂ ಅಂದಾಜು 15 ಲೋಡ್‍ಗಳಷ್ಟು ಯೂರಿಯಾ ಹೊರ ರಾಜ್ಯಕ್ಕೆ ಸಾಗಾಟವಾಗುತ್ತಿರುವದು ಆ ರಾಜ್ಯದಲ್ಲಿ ಲಭ್ಯತೆ ಇಲ್ಲವೆ ಅಥವಾ ತಾಲೂಕಿನಲ್ಲಿ ಕೃತಕ ಯೂರಿಯಾ ಅಭಾವವನ್ನು ಸೃಷ್ಟಿಸುವದಾಗುತ್ತಿದೆಯೇ ಎಂದು ತಿಳಿಯಬೇಕಾಗಿದೆ. ಕೇರಳದ ಹಲವೆಡೆ ಫೈವುಡ್ ಕಾರ್ಖಾನೆಗಳಿಗೆ ಮತ್ತು ಕಲ್ಲುಕೋರೆಗಳಲ್ಲಿ ಇದರ ಬಳಕೆ ಆಗುತ್ತಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಕುಟ್ಟ ವೃತ್ತ ನಿರೀಕ್ಷ ಪಿ.ಕೆ ರಾಜು ನಿರ್ದೇಶನದಂತೆ ಸಹಾಯಕ ಉಪನಿರೀಕ್ಷ ಕುಮಾರ್ ಹಾಗೂ ಸಿಬ್ಬಂದಿ ಚೆಕ್ ಪೋಸ್ಟ್‍ನ ತಪಾಸಣೆಯಲ್ಲಿ ನಡೆಸಿದರು. ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೀನಾ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ರೈತ ಸಂಘ ದೌಡು.. ತನಿಖೆಗೆ ಆಗ್ರಹ

ಸುದ್ದಿ ತಿಳಿಯುತ್ತಿದ್ದಂತೆ ಕೊಡಗು ಜಿಲ್ಲಾ ರೈತ ಸಂಘದ ಸಂಚಾಲಕ ಶ್ರೀಮಂಗಲದ ಚಿಮ್ಮಂಗಡ ಗಣೇಶ್ ನೇತೃತ್ವದಲ್ಲಿ ರೈತ ಮುಖಂಡರು ಠಾಣೆಗೆ ತೆರಳಿ ಸರ್ಕಲ್ ಇನ್ಸ್‍ಪೆಕ್ಟರ್ ರಾಜು ಅವರು ಮಾಡಿರುವ ಉತ್ತಮ ಕೆಲಸಕ್ಕೆ ಅಭಿನಂದಿಸಿದರು. ಹಲವು ಸಮಯದಿಂದ ಕೇರಳಕ್ಕೆ ರೈತರ ಉತ್ಪನ್ನಗಳು ಹಾಗೂ ರಸ ಗೊಬ್ಬರಗಳು ರಾಜರೋಷವಾಗಿ ಸಾಗಾಟವಾಗುತ್ತಿದ್ದವು. ಇದಕ್ಕೆ ಇದೀಗ ಕಡಿವಾಣ ಬಿದ್ದಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರೀನಾ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪೊಲೀಸರು ವಶಪಡಿಸಿಕೊಂಡಿರುವ ರಸ ಗೊಬ್ಬರವನ್ನು ತಮ್ಮ ಸ್ವಾದೀನಕ್ಕೆ ಪಡೆದುಕೊಳ್ಳಬೇಕು. ರಸ ಗೊಬ್ಬರವನ್ನು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಿಸುವ ಪ್ರಯತ್ನದಲ್ಲಿ ಕೈ ಜೋಡಿಸಿರುವ ಸಂಸ್ಥೆಯ ಮುಖ್ಯಸ್ಥರನ್ನು ಹಾಗೂ ಅಧಿಕಾರಿಗಳನ್ನು ತಕ್ಷಣದಿಂದ ಅಮಾನತಿನಲ್ಲಿಟ್ಟು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭ ರೈತ ಮುಖಂಡರುಗಳಾದ ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿಕುಮಾರ್, ಅಜ್ಜಮಾಡ ನವೀನ್, ಮಚ್ಚಮಾಡ ರಂಜಿ, ಮಚ್ಚಮಾಡ ಉದಯ, ಐಯ್ಯಮಾಡ ಹ್ಯಾರಿ ಸೋಮೇಶ್, ಚೊಟ್ಟೆಯಂಡಮಾಡ ಪ್ರವೀಣ್, ಮಾಣೀರ ಗಗನ್ ಮುಂತಾದವರು ಹಾಜರಿದ್ದರು.