ಗೋಣಿಕೊಪ್ಪಲು ವರದಿ, ನ. 16: ಒಂದೊಮ್ಮೆ ತಾಲೂಕಾಗಿದ್ದ..., ಪೊನ್ನಪ್ಪಸಂತೆ ಎಂದೇ ಖ್ಯಾತಿವೆತ್ತಿದ್ದ ದಕ್ಷಿಣ ಕೊಡಗಿನ ಗಡಿಯೆಂದೇ ಹೇಳಲಾಗುವ ಪೊನ್ನಂಪೇಟೆಯಲ್ಲಿ ಕನ್ನಡದ ಕಹಳೆ ಮೊಳಗುತ್ತಿದೆ..., ಹಳದಿ- ಕೆಂಪು ಧ್ವಜಗಳೊಂದಿಗೆ ರಾರಾಜಿಸುತ್ತಿರುವ ಪುಟ್ಟ ಪಟ್ಟಣದಲ್ಲಿ ಕನ್ನಡಮ್ಮನ ದೊಡ್ಡ ಜಾತ್ರೆ ಮೇಳೈಸಲಿದೆ. ‘ಎಲ್ಲೆ ಇರು..., ಎಂತಾದರೂ ಇರು..., ಎಂದೆಂದಿಗೂ ಕನ್ನಡವಾಗಿರು’ ಎಂಬ ಕುವೆಂಪು ವಾಣಿಯಂತೆ ನಾಡಿನ ಜನತೆ ಸಮರೋಪಾದಿಯಲ್ಲಿ ಕನ್ನಡಮ್ಮನ ರಾಜ್ಯಾಧ್ಯಕ್ಷ ತೇರನ್ನು ಎಳೆಯಲು ಸಜ್ಜಾಗಿದ್ದಾರೆ... ನಮ್ಮ ನಿಮ್ಮೆಲ್ಲರನ್ನೂ ಕೈಬೀಸಿ ಕರೆಯುತ್ತಿದ್ದಾರೆ.

ಇದೇ ತಾ. 18 ಹಾಗೂ 19 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯಾ ಸಮ್ಮೇಳನಕ್ಕೆ ಪೊನ್ನಂಪೇಟೆ ಸಜ್ಜುಗೊಂಡಿದ್ದು, ವಿವಿಧ ಸಮಿತಿಗಳಿಂದ ಸಿದ್ಧತೆ ನಡೆಯುತ್ತಿದೆ.

ಪ್ರಾಥಮಿಕ ಶಾಲಾ ಮೈದಾನ ಹಾಗೂ ಕೊಡವ ಸಮಾಜದಲ್ಲಿ ನಡೆಯುವ ಉತ್ಸವಕ್ಕೆ ಪ್ರತ್ಯೇಕವಾಗಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ವಿವಿಧ ಸಮಿತಿಗಳು ಉತ್ಸವದ ಯಶಸ್ವಿಗೆ ಕೈಜೋಡಿಸುವ ಮೂಲಕ ಸಿದ್ಧತೆಯಲ್ಲಿ ತೊಡಗಿಕೊಂಡಿವೆÉ. ಒಟ್ಟು ರೂ. 20 ಲಕ್ಷ ವೆಚ್ಚದ ಅಂದಾಜು ಮಾಡಲಾಗಿದ್ದು, 5 ಸಾವಿರ ಜನರ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ.

(ಮೊದಲ ಪುಟದಿಂದ) ಮುಖ್ಯವಾಗಿ ವೇದಿಕೆ ಸಮಿತಿ ವತಿಯಿಂದ ಪ್ರಾಥಮಿಕ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು 39 ಲಕ್ಷ ರೂ ವೆಚ್ಚದಲ್ಲಿ ವೇದಿಕೆ ನಿರ್ಮಾಣವಾಗುತ್ತಿದೆ.

ಮೂರು ಹೊತ್ತು ಊಟ: ಸಮ್ಮೇಳನದ ಆರಂಭದಿಂದ ಎರಡು ದಿನಗಳ ಕಾಲ ಬೆಳಿಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಹಾಗೂ ಸಂಜೆ ಕಾಫಿ + ತಿಂಡಿ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕೆ ಬಹಳಷ್ಟು ವೆಚ್ಚ ತಗಲಲಿದ್ದು, ಮಹಾಪಪೋಷಕರಾದ ಉಸ್ತುವಾರಿ ಸಚಿವ ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಗೌರವ ಅಧ್ಯಕ್ಷ ಕೆ.ಜಿ. ಬೋಪಯ್ಯ, ... ಮನು ಬಳಿಗಾರ್, ಕಾರ್ಯಾಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಹಾಗೂ ತಂಡದವರು ಎಲ್ಲ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊಡವ ಸಮಾಜದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದಂತೆ ಎಲ್ಲಾ ಕಾರ್ಯಕ್ರಮಗಳು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿವೆÉ.

ಸುಮಾರು 2 ಸಾವಿರ ಜನರು ಆಸೀನರಾಗಲು 60*75 ಅಳತೆಯಲ್ಲಿ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಈ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಕವಿಗೋಷ್ಠಿ ನಡೆಯಲಿದೆ. 40*30 ಅಳತೆಯಲ್ಲಿ ಸಾಂಸ್ಕøತಿಕೆ ವೇದಿಕೆ ನಿರ್ಮಿಸಲಾಗುತ್ತಿದೆ.

ದಿ. ಬಾಚಮಾಡ ಸುಬ್ಬಯ್ಯ ದ್ವಾರ, ಚೆಕ್ಕೇರ ಅಪ್ಪಯ್ಯ ದ್ವಾರ, ಕೀಕಣಮಾಡ ಸುಬ್ಬಯ್ಯ, ಸ್ಕ್ವಾ. ಲೀಡರ್ ಅಜ್ಜಮಾಡ ದೇವಯ್ಯ ದ್ವಾರ, ಬಾಚಮಾಡ ಗಣಪತಿ ದ್ವಾರ ಹಾಗೂ ಚೆರಿಯಪಂಡ ಕುಶಾಲಪ್ಪ ದ್ವಾರಗಳು ನಿರ್ಮಾಣ ಹಂತದಲ್ಲಿವೆ.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ನಾಳೆ ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ಪರಿಷತ್ತು ಧ್ವಜ, ನಾಡಧ್ವಜರೋಹಣ ಮಾಡುವ ಮೂಲಕ ಚಾಲನೆ ದೊರೆಯಲಿದೆ. ನಂತರ ದ್ವಾರಗಳ ಉದ್ಘಾಟನೆ ನಡೆಯಲಿದೆ. ನಂತರ 9.30 ಕ್ಕೆ ಸಮ್ಮೇಳನ ಅಧ್ಯಕ್ಷೆ ಕೇಚಮಾಡ ಸುಬ್ಬಯ್ಯ ತಿಮ್ಮಯ್ಯ ಅವರನ್ನು ಮೆರವಣಿಗೆ ಕೊಡವ ಸಾಂಪ್ರದಾಯಿಕ ವಾಲಗ, ಕನ್ನಡ ಪರ ಸಂಘಟನೆಗಳ ಕಲಾ ಪ್ರದರ್ಶನದೊಂದಿಗೆ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಬಸ್ ನಿಲ್ದಾಣ ಮೂಲಕ ಸಾಗಿ ಮುಖ್ಯ ವೇದಿಕೆಗೆ ಕರೆ ತರಲಾಗುತ್ತದೆ.

ಮೊದಲ ದಿನ ಪುಸ್ತಕ ಮಳಿಗೆ, ಮಾಧ್ಯಮ ಕೇಂದ್ರ, ಛಾಯಾಚಿತ್ರ ಪ್ರದರ್ಶನ ಮಳಿಗೆ, ಸಭಾಂಗಣ, ಅಪ್ಪಚ್ಚ ಕವಿ ವೇದಿಕೆ ಉದ್ಘಾಟನೆಗೊಳ್ಳಲಿದೆ. 11.15 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 1.30 ರಿಂದ ಗೀತಗಾಯನ, ಶೈಕ್ಷಣಿಕ ಗೋಷ್ಠಿ, ಕೊಡಗಿನ ಕೃಷಿ ಸಂಸ್ಕøತಿ ಪರಿಚಯಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ಮೊದಲ ದಿನ ನಡೆಯಲಿವೆ.

ಮನರಂಜನೆ: ಕಾರ್ಯಕ್ರಮಗಳು, ಶೋಗಳು ನಡೆಯುತ್ತಿರುವ ಸಂದರ್ಭದಲ್ಲಿ ಎರಡೂ ದಿನಗಳ ಕಾಲ ನಡು - ನಡುವೆ ಸಾಂಸ್ಕøತಿಕ ಕಾರ್ಯಕ್ರಮಗಳು ರಂಜಿಸಲಿವೆ. ಸಂಜೆ ಪ್ರತ್ಯೇಕವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಮಳಿಗೆಗಳನ್ನು ತೆರೆಯಲಾಗಿದ್ದು, ಪುಸ್ತಕ ಮಳಿಗೆಯಲ್ಲಿ ಅತ್ಯುತ್ತಮ ಸಾಹಿತ್ಯಾತ್ಮಕ ಪುಸ್ತಕಗಳು ಲಭ್ಯವಿರಲಿವೆ. ರಾಜ್ಯದಾದ್ಯಂತ ವಿವಿಧೆಡೆಗಳಿಂದ ಪ್ರಕಾಶಕರು ಭಾಗವಹಿಸಲಿದ್ದಾರೆ.

ಗೀತ ಗಾಯನ ತಾ. 18ರಂದು: ಗಾಯಕರುಗಳು ಚಕ್ಕೇರ ಪಂಚಮ್ ತ್ಯಾಗರಾಜ್, ಮಾಳೇಟಿರ ಅಜಿತ್ ಪೂವಣ್ಣ, ಪರಮೇಶ್ ಬಿ.ಎಸ್., ಲೋಹಿತ್ ಭೀಮಯ್ಯ, ಆನಂದ್ ಕಾರ್ಲ, ನವೀನ್ ಕಿರುಗೂರು, ಉಜ್ವಲ್ ರಂಜಿತ್, ಕುಮಾರಸ್ವಾಮಿ, ಡಿ.ಕೆ. ಸತೀಶ್, ಲಾಲ್ ಕುಮಾರ್, ಎಸ್.ಪಿ. ಪಂಕಜ, ಬಟ್ಟಿಯಂಡ ಲಿಖಿತ.

ಗೀತ ಗಾಯನ ತಾ. 19ರಂದು: ಚಂದ್ರಶೇಖರ್, ಬಿ.ಎ. ಗಣೇಶ್, ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ, ಚಂದ್ರಿಕಾ ಗಣಪತಿ, ಪದ್ಮಾ ಹೆಚ್.ಎನ್., ಇಂದಿರಾ, ಪಂಕಜ ಶ್ಯಾಂ ಸುಂದರ್, ಚಂದನ್ ನೆಲ್ಲಿತ್ತಾಯ, ಕಡ್ಲೆರ ತುಳಸಿ ಮೋಹನ್, ಸಂಧ್ಯಾ ರಾಮ್ ಪ್ರಸಾದ್, ಕಾಂಚನಾ ಕೆ.ಎಸ್.

ಕವಿಗೋಷ್ಠಿ: ಕವಿಗಳು: ಜಲ ಕಾಳಪ್ಪ, ರಾಣಿ ರವೀಂದ್ರ, ಚಾಲ್ರ್ಸ್ ಡಿಸೋಜ, ಸಿದ್ಧರಾಜು ಬೆಳ್ಳಯ್ಯ, ಸಂಗೀತ ರವಿರಾಜ್, ವಿನೋದ್ ಮೂಡಗದ್ದೆ, ಮಂಡೀರ ದಿವ್ಯ, ಕೃಪಾ ದೇವರಾಜ್, ವಿ.ಟಿ. ಶ್ರೀನಿವಾಸ್, ರಂಜಿತಾ ಕಾರ್ಯಪ್ಪ, ಕೆ. ಲೀಲಾ ದಯಾನಂದ್, ಸುಲೈಮಾನ್ ಈ., ತುಳಸಿ, ಕೆ.ಟಿ. ಕೌಸಲ್ಯ, ಮಾಲಾದೇವಿ ಮೂರ್ತಿ, ನಾ. ಕನ್ನಡಿಗ ಟಾಮಿ ಥೋಮಸ್, ಕೇಕಡ ಜೀವಿತಾ ರವೀಂದ್ರ

ಆಕ್ಷೇಪ: ಪೊನ್ನಂಪೇಟೆಯಲ್ಲಿ ಆಯೋಜಿಸಿರುವ ಕೊಡಗು ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವದೇ ಪಾರದರ್ಶಕತೆ ಕಾಯ್ದು ಕೊಂಡಿಲ್ಲ, ಸಾರ್ವಜನಿಕರನ್ನು ಕಡೆಗಣಿಸಿ ಕಾರ್ಯಕ್ರಮ ನಡೆಸಲು ಮುಂದೂ ಡಲಾಗಿದೆ ಎಂದು ಕರ್ನಾಟಕ ರಕ್ಷಣ ವೇದಿಕೆ (ಕದಂಬ ಸೇನೆ) ರಾಜ್ಯ ಕಾನೂನು ಮುಖ್ಯ ಸಲಹೆಗಾರ ಸಂದೇಶ್ ನೆಲ್ಲಿತ್ತಾಯ ಆರೋಪ ಮಾಡಿದ್ದಾರೆ. ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವದು ಸಂತೋಷದ ವಿಷಯ,

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಮಂದಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಆ ವ್ಯಕ್ತಿಗಳನ್ನು ಕಡೆಗಣಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಯಾವದೇ ಕೊಡುಗೆ ನೀಡದ ಕೆಲವೊಂದು ವ್ಯಕ್ತಿಗಳನ್ನು ಗೌರವಿಸುತ್ತಿರುವದು ನಿಜಕ್ಕೂ ನೋವಿನ ಸಂಗತಿ. ಸಮ್ಮೇಳನದ ಸಂಘಟಕರು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಂಡು ನೈಜ ಕನ್ನಡ ಅಭಿಮಾನಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಅರೋಪಿಸಿದ್ದಾರೆ.