ಮಡಿಕೇರಿ, ನ. 18: ಭಗವತಿನಗರದ ಅಂಗನವಾಡಿಯಲ್ಲಿ 24 ವರ್ಷಗಳ ಸುದೀರ್ಘ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಬಿ.ಎಸ್. ಇಂದಿರಾ ಅವರಿಗೆ ಅಲ್ಲಿನ ಶ್ರೀ ದುರ್ಗಾ ಸ್ತ್ರೀ ಶಕ್ತಿ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಶ್ರೀ ದುರ್ಗಾ ಸ್ತ್ರೀ ಶಕ್ತಿ ಸಂಘದ ಸದಸ್ಯರೂ ಆಗಿರುವ ಇಂದಿರಾ ಅವರು ತಮ್ಮ ಸೇವಾವಧಿಯಲ್ಲಿ ಅಂಗನವಾಡಿಯ ಮಕ್ಕಳನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಉತ್ತಮ ಸಹಾಯಕಿ ಪ್ರಶಸ್ತಿಗೆ ಭಾಜನರಾದವರು. ಅವರ ಸಮಾಜ ಸೇವೆ ಇತರರಿಗೆ ಮಾದರಿ ಆಗುವಂತದ್ದು ಎಂದು ಸಂಘಟನೆಯ ಸದಸ್ಯೆ ಶುೃತಿ ಬಣ್ಣಿಸಿದರು.
ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ ಇಂದಿರಾ ಅವರನ್ನು ಸನ್ಮಾನಿಸಿದರು.
ಇದೇ ಸಂದರ್ಭ ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಂಗನವಾಡಿ ಪರಿಸರದಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ಹಮ್ಮಿ ಕೊಂಡಿದ್ದರು. ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿಯ ಚಿಣ್ಣರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಸದಸ್ಯರುಗಳಾದ ಸಾರಾ ಮಹಮದ್, ಅರೆಯಂಡ ಮಾಚಮ್ಮ, ಕನ್ನಿಕೆ, ಶೋಭಾ, ಪಾರ್ವತಿ, ನೀಲಾ ರೈ, ಶೈಲ, ಲೀಲಾ, ರೇವತಿ, ಚೋಂದಕ್ಕಿ, ಗಂಗೆ ಮುಂತಾದವರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆ ಸಿದ್ದಂಡ ಶಶಿ ಕುಶಾಲಪ್ಪ ಪ್ರಾರ್ಥನಾ ಗೀತೆ ಹಾಡಿದರು. ಸದಸ್ಯೆ ಶೀಲಾ ಟೈಲರ್ ಸ್ವಾಗತಿಸಿ, ವಂದಿಸಿದರು.