ಗೋಣಿಕೊಪ್ಪ ವರದಿ, ನ. 17: ಎರಡು ದಿನ ನಡೆಯುವ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಅಂತರ ಶಾಲಾ ಕ್ರೀಡಾಕೂಟಗಳಿಗೆ ದೇವರಪುರ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ಶ್ರೀ ಕೈಲಾಸ ಮಠದ ಪೀಠಾಧಿಪತಿ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ನಂತರ ರಾಜ್ಯದಲ್ಲಿರುವ ಗುಂಡ್ಲುಕೋತೂರು, ಬೆಂಗಳೂರು, ಹುಲ್ಕೋಟಿ, ಕೆಂಚನಹಳ್ಳಿಯಲ್ಲಿನ ರಾಜರಾಜೇಶ್ವರಿ ಶಾಲೆಗಳ ಕ್ರೀಡಾಪಟುಗಳು ಪಥಸಂಚಲನ ನಡೆಸಿದರು. ಶಾಲಾ ಕ್ರೀಡಾ ನಾಯಕ ಗಗನ್ ಕ್ರೀಡಾಜ್ಯೋತಿ ಬೆಳಗಿಸಿದರು. ದೈಹಿಕ ಶಿಕ್ಷಕ ಪಿ. ಎಂ. ಮುರುಳಿ ಪ್ರಮಾಣ ವಚನ ಭೋದಿಸಿದರು.
ಕೊಡಗಿನ ಕ್ರೀಡಾಪಟುಗಳು ಕೊಡವ ಸಾಂಪ್ರಾದಾಯಕ ಉಡುಪು ತೊಟ್ಟು ಸ್ವಾಮೀಜಿ ಅವರನ್ನು ಸ್ವಾಗತಿಸಿಕೊಂಡರು. ನಂತರ ಮಾತನಾಡಿದ ಜಯೇಂದ್ರ ಪುರಿ ಮಹಾಸ್ವಾಮೀಜಿ, ಕ್ರೀಡೆಗಳಿಂದ ವ್ಯಕ್ತಿತ್ವ ವಿಕಸನಕ್ಕೆ ಅವಕಾಶವಿದೆ. ಪೋಷಕರು ಕೂಡ ಕ್ರೀಡೆಗೆ ಪ್ರೋತ್ಸಾಹಿಸ ಬೇಕೆಂದರು. ಹಿರಿಯ ಕ್ರೀಡಾಪಟು ಮಾರಮಾಡ ಮಾಚಮ್ಮ ಮಾತನಾಡಿ, ಕ್ರೀಡಾ ಮನೋಭಾವನೆ ಹೊಂದಿರುವವರು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಕ್ರೀಡೆ ಇಂದು ಬರೀ ಹವ್ಯಾಸವಾಗಿರದೇ ಅದು ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಅರ್ಥಿಕವಾಗಿ ಮುಂದುವರೆಯಲು ಕ್ರೀಡೆ ಕೂಡ ಸಹಾಯ ಮಾಡುತ್ತದೆ ಎಂದರು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಹಯಗ್ರೀವ ಆಚಾರ್ಯ, ಸಂಸ್ಥೆಯ ನಿರ್ದೇಶಕರು ಗಳಾದ ಡಾ. ಶಿವಪ್ಪ, ವಿಕ್ರಮ್, ಕಾವೇರಪ್ಪ, ವ್ಯವಸ್ಥಾಪಕ ಚಂದ್ರಶೇಖರ್, ಮುಖ್ಯಶಿಕ್ಷಕ ಶಶಿಧರ್ ಪಾಲ್ಗೊಂಡಿದ್ದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಥ್ರೋಬಾಲ್, ಖೋ ಖೋ ಸೇರಿದಂತೆ ಇನ್ನಿತರ ಕ್ರೀಡಾಕೂಟ ನಡೆಯಲಿದೆ.