ನಾನು ಹುಟ್ಟಿದ ನನ್ನೂರು ಪೊನ್ನಂಪೇಟೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ‘ನುಡಿಹಬ್ಬ’ ನಡೆಯುತ್ತಿದೆ. ಇದು ನನಗೆ ಅತೀವ ಸಂತಸ ತಂದಿದೆ. ಪೊನ್ನಪ್ಪ ದಿವಾನರು ಕಟ್ಟಿಸಿ ಮೆರೆದ ನಾಡು ಪೊನ್ನಂಪೇಟೆ. ಈ ನಾಡು ದಾರ್ಶನಿಕರ ಕರ್ಮಭೂಮಿ. ಇಲ್ಲಿ ಪರಮಪೂಜನೀಯ ಶ್ರೀರಾಮಕೃಷ್ಣ ಶಾರದಾಶ್ರಮವಿದೆ. ಮಹಾತ್ಮಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ಬಂದು ತಂಗಿದ್ದ ಊರು. ಇಲ್ಲಿ ಗಾಂಧಿ ಮೈದಾನ-ಗಾಂಧಿ ಕೆರೆಗಳಿವೆÉ. ಆಚಾರ್ಯ ವಿನೋಭಬಾವೆ ಭೂದಾನ ಚಳುವಳಿ ನಡೆಸುತ್ತಾ ಬಂದು ತಂಗಿದ್ದ ಊರು. ಶ್ರೀ ಸದ್ಗುರು ಸಾಯಿ ಶಂಕರರ ನೆಲೆವೀಡು.
ಕೊಡಗಿನ ಮೊದಲ ಸ್ವಾತಂತ್ರ್ಯ ಚಳುವಳಿ ನೇತಾರ ಪಾರುವಂಗಡ ಕುಶಾಲಪ್ಪರ ಹೋರಾಟದ ಕಿಚ್ಚು ಹತ್ತಿಸಿದ ಪೇಟೆ ಇದು. 1975ರ ತುರ್ತು ಪರಿಸ್ಥಿತಿಯಲ್ಲಿ ಚಿರಿಯಪಂಡ ಕುಶಾಲಪ್ಪರಾದಿಯಾಗಿ‘ ಕರಾಳದಿನ’ದ ವಿರುದ್ಧ ಚಳುವಳಿ ನಡೆಸಿ ಜೈಲು ಸೇರಿದ ಮಹನೀಯರ ಪೇಟೆ. ನನ್ನಂತಹ ಒಬ್ಬ ಸಣ್ಣ ರಂಗಕರ್ಮಿಗಳಿಗೆ ಆಶ್ರಯ ನೀಡಿದ ತಾಣ. ಕಲಾವಿದರ-ಸಾಹಿತಿಗಳ ಮನಸ್ಸನ್ನು ಹಗುರವಾಗಿಸುವ ಪೊನ್ನಂಪೇಟೆ. ಕೊಡವ-ಕನ್ನಡ ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿನ ಸಾಧಕರಿರುವ ಜಾಗ. ಸುತ್ತಲೂ ವಿದ್ಯಾ ಕೇಂದ್ರಗಳ ಸಂಗಮ. ಮಾಹಾನ್ ಸಾಧಕ-ದಾರ್ಶನಿಕ ‘ಬದುಕಲು ಕಲಿಯಿರಿ’ ಪುಸ್ತಕ ಬರೆದಶ್ರೀ ಜಗದಾತ್ಮಾನಂದ ಸ್ವಾಮೀಜಿ ನೆಲೆಸಿರುವ ಪುಣ್ಯಸ್ಥಳ. (ಬದುಕಲು ಕಲಿಯಿರಿ ಪುಸ್ತಕ ಭಾರತದ 10 ಭಾಷೆಗಳಲ್ಲಿ ಅನುವಾದಗೊಂಡಿದೆ)
ಇಂತಹ ಐತಿಹಾಸಿಕ ಪುಣ್ಯ ಸ್ಥಳದಲ್ಲಿ ಕನ್ನಡ ನುಡಿಹಬ್ಬ ನಡೆಯುತ್ತಿದೆ. ಇದು ಅತ್ಯಂತ ಯಶಸ್ವಿಯಾಗಲಿ. ಕನ್ನಡ ಮೊಳಗಲಿ.
1932ರಲ್ಲಿ ಮಡಿಕೇರಿಯಲ್ಲಿ ನಡೆದ 18ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ದಿಗ್ಗಜರಾದ ಜ್ಞಾನಪೀಠ ಪುರಸ್ಕøತ ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಜಿ) ಅಧ್ಯಕ್ಷರಾಗಿದ್ದರು. (ಮಂಕುತಿಮ್ಮನ ಕಗ್ಗ ಖ್ಯಾತಿ) ಡಿ.ವಿ.ಜಿ.ಯವರು 85 ವರ್ಷಗಳ ಹಿಂದೆ ಮಡಿಕೇರಿಯ ಸಮ್ಮೇಳನದಲ್ಲಿ ಮಾಡಿದ ಭಾಷಣದ ಕೊನೆಯ ತುಣುಕು ಇಂದಿನ ಸಮ್ಮೇಳನಕ್ಕೆ ಅತ್ಯಂತ ಪ್ರಸ್ತುತ.
“ನಮ್ಮ ಸಣ್ಣ ಕೊರತೆಗಳು ಹಾಗಿರಲಿ. ಅವು ನಮ್ಮನ್ನು ಕುಗ್ಗಿಸಬೇಕಾದುದಿಲ್ಲ. ಮಾತ್ಸರ್ಯವನ್ನು ತೊರೆದು, ಒಗ್ಗಟ್ಟಿನಿಂದ ಕನ್ನಡದ ಸೇವಕರು ಕೆಲಸ ಮಾಡಿದರೆ ನಮ್ಮ ಜನ, ಧನ, ದಾರಿದ್ರ್ಯವನ್ನು ನೀಗುವದೊಂದು ಮಹಾ ಕಷ್ಟವಲ್ಲ.
ದಿಗಂತವು ಪ್ರಕಾಶಮಾನವಾಗಿದೆ. ಪಕ್ಷಿಗಳು ಸಂತೋಷದ ಕಲರವದೊಡನೆ ಆಕಾಶದ ಕಡೆ ಹಾರುತ್ತಿದೆ. ನನ್ನದೆಯಲ್ಲಿ ಅಸೆಯುಕ್ಕುತ್ತಿದೆ. ನಮಗಿರುವ ಕಷ್ಟಗಳನ್ನೊತ್ತಟ್ಟಿಗಿರಿಸಿ ಮುಂದೆ ಇರುವ ಕರ್ತವ್ಯದಲ್ಲಿ ಮನಸ್ಸಿಡೋಣ. ನಮ್ಮ ಭಾಷೆಯು ನಮ್ಮ ಪ್ರೀತಿ ಕೃತಜ್ಞತೆಗಳಿಗೆ ಅರ್ಹವಾದುದ್ದು. ಅದು ಚೆನ್ನಾಗಿ ಬಾಳಿದರೆ ನಮ್ಮಜನದ ಬಾಳು ಮೇಲಾಗುತ್ತದೆ. ಅದನ್ನು ಸಮೃದ್ಧಿಪಡಿಸುವದಕ್ಕಿಂತ ನಮಗೆ ದೊಡ್ಡ ಧರ್ಮವಾವುದು? ಅದರ ಕೋಶಾಗಾರದಲ್ಲಿ ಎಲ್ಲ ಸಂಪತ್ತುಗಳೂ ತುಂಬಿರಬೇಕು. ಅವುಗಳನ್ನು ನಮ್ಮ ಪ್ರಯತ್ನದಿಂದ ನಿರ್ಮಿಸಿ ಹೆಚ್ಚಿಸಬೇಕು. ನಮ್ಮಲ್ಲಿಲ್ಲದುದನ್ನು, ನಮ್ಮಿಂದಾಗ ದುದನ್ನು, ದಶದಿಕ್ಕುಗಳಿಂದಲೂ ಶೇಖರಿಸಿ ತರಬೇಕು.
ರಾಜನಂದಿನಿಯ ಸಿಂಗಾರಕ್ಕೆ ಕಾಶ್ಮೀರದ ಅಗರೂ, ನೇಪಾಳದ ಕಸ್ತೂರಿಯೂ, ಗಾಂಧಾರದ ಕೇಸರಿಯೂ, ಫಾರಸಿಯ ಪನ್ನೀರೂ, ಮೈಸೂರಿನ ಚಂದನವೂ, ಮಲೆಯಾಳದ ಧೂಪವೂ ಬಂದು ಒದಗುವಂತೆ, ಭೂಮಂಡಲದ ಎಲ್ಲಾ ಸಾಹಿತ್ಯ ಎಲ್ಲಾ ವೈದುಷ್ಯಗಳ ಸಾರವಸ್ತುಗಳೂ, ನಮ್ಮ ಭಾಷೆಯ ಭಂಡಾರಕ್ಕೆ ಬಂದು, ನಮ್ಮ ಸ್ವಶಕ್ತಿ, ಕಲ್ಪಿತಗಳಾದ ನಾನಾ ಪರಿಕರಗಳೊಡಗೂಡಿ, ನಮ್ಮ ಜನ ಜೀವನಕ್ಕನುವಾಗಬೇಕು. ಕನ್ನಡದ ಒಂದೊಂದು ನುಡಿಯು ಕಿಡಿಯಾಗಬೇಕು, ಸಿಡಿಲಾಗಬೇಕು, ನಕ್ಷತ್ರಗಳಾಗಬೇಕು, ಅಮೃತ ಬಿಂದುವಾಗಬೇಕು. ನಮ್ಮ ಆಸೆ, ಈ ಆಸೆಗಾಗಿ ದುಡಿಯುವದರಲ್ಲಿ ಎಲ್ಲಾ ದೇಶ ಭಾಷಾ ಬಾಂಧವರೂ ಅವರ ಅದೃಷ್ಟ ಶಕ್ತಿಗಳು ಸಹಕರಿಸಲಿ.
ಕೊಡಗಿನ ಮಹಾಜನರೆ, ನಿಮ್ಮ ದೇಶವು ಸೃಷ್ಟಿಯ ಸೌಂದರ್ಯ ದಿಂದಲೂ, ನಿಮ್ಮ ಸರಳತೆ ಉದಾರತೆಗಳಿಂದಲೂ, ಕನ್ನಡಿಗರಿಗೆಲ್ಲ ಅತ್ಯಂತ ಪ್ರಿಯವಾಗಿದೆ. ಕರ್ನಾಟಕ ಮಹಾ ಸಮಾರಂಭದಲ್ಲಿ ಈ ನಾಡು ತಕಷ್ಟು ಮುಂದೆ ಬಂದು ಸೇರಿಲ್ಲವಲ್ಲಾ ಎಂಬ ಕಳವಳವೂ ಕೆಲವರಿಗೆ ಇದುವರೆಗೆ ಇದ್ದಿತ್ತು. ಅಂತಹ ಕೊರತೆಗೆ ಕಾರಣವಿಲ್ಲ ಎಂಬವದು ಈಗ ಸ್ಪಷ್ಟವಾಗಿದೆ. ತಾವು ಭ್ರಾತೃವಾತ್ಸಲ್ಯದಿಂದ ಹೊರಗಿನ ಕನ್ನಡಿಗರನ್ನು ಬರಮಾಡಿಕೊಂಡು, ಕರ್ನಾಟಕ ಸಾಹಿತ್ಯ ಪರಿಷತ್ತು ತಮಗೂ ಸೇರಿದ್ದೆಂದು ಭಾವಿಸಿ, ಇದನ್ನು ಇಲ್ಲಿಗೆ ಕರೆದು ಆದರಿಸಿರುವದಕ್ಕಾಗಿ ಎಲ್ಲಾ ಕನ್ನಡಿಗರ ಪರವಾಗಿ ನಾನು ತಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ನಮ್ಮ ಸೋದರಭಾವವೂ ನಮ್ಮೆಲ್ಲರ ನುಡಿಯೂ, ನಾಡೂ ಏಳಿಗೆ ಪಡೆಯಲಿ”.
ಡಿ.ವಿ.ಜಿ.ಯವರ ಈ ಭಾಷಣ ಇಂದಿಗೂ ಪ್ರಸ್ತುತ. ರಾಗದ್ವೇಷವಿಲ್ಲದೆ ದುಡಿಯುತ್ತಿರುವ ಪರಿಷತ್ತಿನ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು. ನಮ್ಮ ನಾಡು-ನುಡಿಬೆಳಗಲಿ.
- ಅಡ್ಡಂಡ ಕಾರ್ಯಪ್ಪ, ಸಾಹಿತಿಗಳು, ಪೊನ್ನಂಪೇಟೆ.