ಮಡಿಕೇರಿ, ನ. 18: ರಾಜಕಾರಣದಲ್ಲಿ ಪ್ರತಿಯೊಬ್ಬರೂ ಈ ದೇಶದ ಬೆನ್ನೆಲುಬು, ಕೃಷಿ... ರೈತ ಅನ್ನದಾತ... ಇತ್ಯಾದಿ ಪದಪುಂಜಗಳನ್ನು ಪೋಣಿಸಿ ಉದ್ದುದ್ದ ಭಾಷಣ ಬಿಗಿಯುತ್ತಾರೆಯೇ ಹೊರತು... ನಿಜವಾಗಿ ರೈತರ ಬಗ್ಗೆ ಯಾವ ರೀತಿಯ ಕಾಳಜಿಯನ್ನೂ ಹೊಂದಿಲ್ಲ ಎಂಬದಕ್ಕೆ ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾಜಾ ಉದಾಹರಣೆಯಾಗಿದೆ.

ಒಂದೊಮ್ಮೆ ಈ ಎ.ಪಿ.ಎಂ.ಸಿ. ರಾಜ್ಯಮಟ್ಟದಲ್ಲಿ ಶುಲ್ಕ ಸಂಗ್ರಾಹಾತಿಯಲ್ಲಿ ಸುದ್ದಿಯಾಗುವದರೊಂದಿಗೆ, ಹಗರಣಗಳ ಸರಮಾಲೆಯ ಪ್ರಚಾರದಲ್ಲಿತ್ತು. ಬದಲಾಗಿ ಈ ರೈತರ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಕೇವಲ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿಯನ್ನಷ್ಟೇ ಹೊಂದಿದೆ. ಬದಲಾಗಿ ಇಲ್ಲಿನ ಹೆದ್ದಾರಿಗೆ ಹೊಂದಿಕೊಂಡಂತೆ ರಾಜ್ಯ ಸಾರಿಗೆ ಬಸ್ ಡಿಪೋ ಎದುರು ಇರುವಂತಹ ಎ.ಪಿ.ಎಂ.ಸಿ. ಆವರಣದ ಒಳ ಪ್ರವೇಶಿಸಿದರೆ ಅನಾಥಗೊಂಡಿರುವ ದೃಶ್ಯ ಎದುರಾಗಲಿದೆ.

ಈ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಯಾರೊಬ್ಬರು ಅಧಿಕಾರಿಗಳು ಹಾಗೂ ಸಿಬ್ಬಂದಿ ಖಾಯಂ ಇಲ್ಲ. ಸಂಬಂಧಿಸಿದ ಕಾರ್ಯದರ್ಶಿಯ ಪ್ರಮುಖ ಹುದ್ದೆಯೇ ಖಾಲಿಯಿದ್ದು, ಯಾರೀ ಒಬ್ಬರು ಪ್ರಬಾರ ಅಧಿಕಾರಿ ಸಮಿತಿಯ ಸಭೆ ಇತ್ಯಾದಿ ನಡೆಯುವ ವೇಳೆ ಜನಪ್ರತಿನಿಧಿಗಳಿಗೆ ಕಾಣಸಿಗುತ್ತಾರಂತೆ. ಮಾತ್ರವಲ್ಲದೆ ಲೆಕ್ಕಾಧಿಕಾರಿ, ಮಾರುಕಟ್ಟೆ ನಿರೀಕ್ಷಕರು, ಗುಮಾಸ್ತರು, ಇಲಾಖೆಯ ವಾಹನ ಚಾಲಕರು ಇತ್ಯಾದಿ ಎಲ್ಲಾ ಹುದ್ದೆಗಳು ಖಾಲಿ ಬಿದ್ದಿವೆ. ಯಾವದೇ ಒಂದು ಖಾಸಗಿ ಸಂಸ್ಥೆಯಿಂದ ಗುತ್ತಿಗೆಗೆ ನಿಯೋಜನೆಗೊಂಡಿರುವ ಕೈಬೆರಳೆಣಿಕೆಗೂ ನಿಲುಕದ ಮೂರು ಮಂದಿ ಇಲ್ಲಿ ‘ಆಟಕ್ಕುಂಟು... ಲೆಕ್ಕಕಿಲ್ಲ...’ ಎಂಬಂತೆ ಯಾವದೇ ಮಾಹಿತಿ ನೀಡಲು ಕೂಡ ಅಧಿಕಾರ ಹೊಂದಿಲ್ಲ. ಕನಿಷ್ಟ ಜನಪ್ರತಿನಿಧಿಗಳು ತಮ್ಮ ಉಪಸ್ಥಿತಿಯಲ್ಲಿ ಏನಾದರೂ ಕೆಲಸ ನಿರ್ವಹಿಸಬೇಕಾದರೆ, ಕನಿಷ್ಟ ಕಾರ್ಯದರ್ಶಿ ತೀರಾ ಅನಿವಾರ್ಯವಿದ್ದರೂ, ಎಲ್ಲೋ ಇರುವ ಬೇರೆ ಹೊಣೆಗಾರಿಕೆ ಹೊಂದಿರುವ ಅಧಿಕಾರಿಯನ್ನು ಕರೆಸಿಕೊಂಡು ಸಕಾಲದಲ್ಲಿ ಕೆಲಸ ಮಾಡಿಸಲು ಎ.ಪಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಲಭಿಸುತ್ತಿಲ್ಲವಂತೆ.

ಪರಿಣಾಮ ಮಡಿಕೇರಿಯ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಸಂಸ್ಥೆ ರೈತರಿಗೆ ಆಸರೆಯಾಗುವ ಬದಲಿಗೆ ಅನಾಥಗೊಂಡಂತೆ ಭಾಸವಾಗತೊಡಗಿದೆ. ಕೃಷಿ ಉತ್ಪನ್ನಗಳಿಗೆ ಸುಮಾರು ರೂ. 40 ಲಕ್ಷದಷ್ಟು ತೆರಿಗೆ ವಸೂಲಿಗೆ ಬದಲು ಹತ್ತಾರು ಲಕ್ಷ ಮಾತ್ರ ಗುರಿ ತಲುಪಿರುವ ಬಗ್ಗೆ ಮಾಹಿತಿ ಲಭಿಸಿದೆ.

ಇನ್ನೊಂದೆಡೆ ಈ ಎ.ಪಿ.ಎಂ.ಸಿ. ಪ್ರವೇಶ ದ್ವಾರದಲ್ಲೇ ಕಾವಲು ಸಿಬ್ಬಂದಿಗೆ ನಿರ್ಮಿಸಿರುವ ಭದ್ರತಾ ಕಚೇರಿ ಮೊದಲ್ಗೊಂಡು ಇಡೀ ಪರಿಸರ ನೋಡಿಕೊಳ್ಳುವಷ್ಟು ವ್ಯವಸ್ಥೆಯ ಕೊರತೆಯಿಂದ ಬಹುತೇಕ ಎ.ಪಿ.ಎಂ.ಸಿ. ಆಸ್ತಿ ಕಂಡವರ ಪಾಲಾಗುತ್ತಿರುವ ಸನ್ನಿವೇಶ ಗೋಚರಿಸಿದೆ. ಎ.ಪಿ.ಎಂ.ಸಿ.ಯಂತ ಸಂಸ್ಥೆಗಳನ್ನು ನಿರ್ವಹಿಸಲಾರದ ಸರಕಾರಗಳು ಅಥವಾ ಇಲಾಖೆಗಳು ಇದ್ದು ಪ್ರಯೋಜನವೇನು? ಎಂಬ ಪ್ರಶ್ನೆ ಹುಟ್ಟಿಕೊಳ್ಳಲಿದೆ.

ಆವರಣದೊಳಗೆ ರಸ್ತೆ: ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದೊಳಗೆ ನಗರಸಭೆಯಿಂದ ಸದಸ್ಯ ಹೆಚ್.ಎಂ. ನಂದಕುಮಾರ್ ಮುಂದಾಳತ್ವದಲ್ಲಿ ನೂತನ ಸಾರ್ವಜನಿಕ ರಸ್ತೆಯೊಂದು ನಿರ್ಮಾಣವಾಗುತ್ತಿದ್ದು, ಎಪಿಎಂಸಿ ಆಡಳಿತ ಮಂಡಳಿ ಮೌನಕ್ಕೆ ಶರಣಾಗಿದೆ. ನಗರಸಭೆಯಿಂದ ಎಪಿಎಂಸಿ ಮುಖ್ಯ ದ್ವಾರದ ಬಳಿಯೇ ಹೊಸ ತಡೆಗೋಡೆ ಸಹಿತ ಪರ್ಯಾಯ ರಸ್ತೆಯ ಕಾಮಗಾರಿ ಭರದಿಂದ ಸಾಗಿದೆ. ನ್ಯಾಯಾಲಯದಿಂದ ರಸ್ತೆ ಕಾಮಗಾರಿಗೆ ಎಪಿಎಂಸಿ ತಡೆಯೊಡ್ಡದಂತೆ ಈಗಾಗಲೇ ‘ಕೇವಿಯೆಟ್’ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ‘ಶಕ್ತಿ’ ನಗರಸಭಾ ಸದಸ್ಯರ ಗಮನ ಸೆಳೆದಾಗ, ಸಾರ್ವಜನಿಕರ ಮನೆಗಳಿಗೆ ತೆರಳಲು ಎಪಿಎಂಸಿ ಅವಕಾಶ ನೀಡದೆ ಗೇಟ್‍ಗೆ ಬೀಗ ಹಾಕಿರುವ ಕಾರಣ ನಿತ್ಯ ಕಿರಿಕಿರಿ ಉಂಟಾಗಿದೆ. ಹೀಗಾಗಿ ಮೂರ್ನಾಲ್ಕು ಅಲ್ಪಸಂಖ್ಯಾತ ವರ್ಗದ ಕುಟುಂಬಗಳು ಹಾಗೂ ಇತರರಿಗೆ ನಿತ್ಯ ಓಡಾಡಲು ದಾರಿಯಿಲ್ಲದ ಹಿನ್ನೆಲೆ, ನಗರಸಭೆಯಿಂದ ರಸ್ತೆ ನಿರ್ಮಿಸುತ್ತಿರುವದಾಗಿ ವಿವರಣೆ ನೀಡಿದರು.

ಅಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ರಸ್ತೆಗೆ ನೀಲಿ ನಕಾಶೆಯಲ್ಲಿ ಕ್ರಿಯಾಯೋಜನೆ ಕೂಡ ರೂಪಿಸಿದ್ದು, ಈ ಹಿಂದೆ ಎಪಿಎಂಸಿಗೆ ದಾನಿಗಳು ನೀಡಿದ ಜಾಗದ ಒಂದು ಬದಿಯಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಅನೇಕ ವರ್ಷಗಳಿಂದ ಹಳೆಯ ಮಾರ್ಗದಲ್ಲಿ ಸ್ಥಳೀಯ ನಿವಾಸಿಗಳು ಸಂಚರಿಸುತ್ತಿದ್ದರೂ ಗೇಟ್‍ಗೆ ಬೀಗ ಜಡಿದಿರುವ ಹಿನ್ನೆಲೆ ತೊಂದರೆ ಎದುರಿಸಬೇಕಾಗಿತ್ತು ಎಂದು ಬೊಟ್ಟು ಮಾಡಿದರು.

ಎಪಿಎಂಸಿ ಮೂಲಗಳ ಪ್ರಕಾರ 4.20 ಎಕರೆ ಜಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಸ್ತಿಯಾಗಿದ್ದು, ಈಗಿನ ರಸ್ತೆ ಸೇರಿದಂತೆ ಕೆಲವರು ಜಾಗ ಅತಿಕ್ರಮಿಸಿರುವ ಸಂಶಯದಿಂದ ಕಾನೂನಿನ ಮೊರೆ ಹೋಗಬೇಕಾಗಿದೆ ಎಂದು ಎ.ಪಿ.ಎಂ.ಸಿ. ಜನಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಸರ್ವೆ ನಡೆಸಿ ಎಪಿಎಂಸಿಗೆ ಸೇರಿರುವ ಜಾಗದ ಸರಹದ್ದು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಇನ್ನಷ್ಟೆ ಭೂಮಾಪನ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಮಡಿಕೇರಿ ಎ.ಪಿ.ಎಂ.ಸಿ. ಅನಾಥಗೊಂಡಂತೆ ಗೋಚರಿಸುತ್ತಿದ್ದರೆ, ಗೋಣಿಕೊಪ್ಪಲು ಎ.ಪಿ.ಎಂ.ಸಿ. ಕಾಳುಮೆಣಸು ಹಗರಣದಲ್ಲಿ ನಿತ್ಯ ಸುದ್ದಿಯಲ್ಲಿರುವದು ಕೊಡಗಿನ ದುರಂತ. - ಶ್ರೀಸುತ