ಮಡಿಕೇರಿ, ನ.17: ಸಿನಿಮಾ ಮನರಂಜನೆ ಜೊತೆಗೆ ಸಮಾಜದ ಕನ್ನಡಿಯಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಾಧ್ಯಮವಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಸದಸ್ಯರಾದ ಬಿ.ಜಿ. ಅನಂತಶಯನ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳ ಉಚಿತ ಪ್ರದರ್ಶನ ಸಪ್ತಾಹಕ್ಕೆ ಚಾಲನೆ’ ನೀಡಿ ಅವರು ಮಾತನಾಡಿದರು.

ಒಳ್ಳೆಯ ಸಂದೇಶವಿರುವ ಸಿನಿಮಾಗಳನ್ನು ನೋಡಿ ಅದನ್ನು ಅಳವಡಿಸಿಕೊಳ್ಳುವಂತಾಗಬೇಕು. ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಸಿನಿಮಾವು ಜೀವನದ ಚಿತ್ರಣ ಪ್ರತಿಬಿಂಬಿಸುವದರ ಜೊತೆಗೆ ಅದನ್ನು ಪಾಲಿಸಲು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಆಗಮಿಸಿ ಚಲನಚಿತ್ರ ವೀಕ್ಷಣೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ತಾ. 18 ರಂದು ಕಿರಿಕ್ ಪಾರ್ಟಿ, 19 ರಂದು ರಾಮ ರಾಮ ರೇ, 20 ರಂದು ಮದಿಪು-ತುಳು ಭಾಷೆ ಚಲನಚಿತ್ರ, 21 ರಂದು ಯೂಟರ್ನ್, 22 ರಂದು ಅಲ್ಲಮ, ನವೆಂಬರ್ 23 ರಂದು ಮಾರಿಕೊಂಡವರು, ಈ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶವಿದೆ ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಕುಸುಮ, ಕಾವೇರಿ ಮಹಲ್ ಚಿತ್ರಮಂದಿರದ ಮಾಲೀಕ ಪಾಲಾಕ್ಷಪ್ಪ ಇತರರು ಇದ್ದರು. ಪ್ರಾಥಮಿಕ ಶಾಲೆಯ ಶಿಕ್ಷಕಿ ರೇವತಿ ರಮೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು.

ಸಾಮಾಜಿಕ ಕಳಕಳಿ ಹೊಂದಿರುವ ಅಮಾರಾವತಿ ಚಲನಚಿತ್ರ ನೋಡುಗರ ಗಮನ ಸೆಳೆಯಿತು.