ಶ್ರೀಮಂಗಲ, ನ. 17: ರಾಜ್ಯ ಸರ್ಕಾರ ಕಳೆದ 2 ತಿಂಗಳಿಂದ ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ಮಾಹಿತಿಯನ್ನು ಕೇಳಿದ್ದು ಸಂಪೂರ್ಣವಾದ ವರದಿಯನ್ನು ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಲ್ಲದೆ, ಮುಂದಿನ ದಿನಗಳಲ್ಲೂ ಸರ್ಕಾರಕ್ಕೆ ಈ ಬಗ್ಗೆ ತಾಲೂಕು ಬೇಡಿಕೆಯ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗುವದು ಎಂದು ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರು ಭರವಸೆ ನೀಡಿದ್ದಾರೆ. ಅವರು ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿ ಪ್ರತಿಭಟನಾ ಕಾರರಿಂದ ಮನವಿ ಸ್ವೀಕರಿಸಿ ಈ ಭರವಸೆ ನೀಡಿದರು.
ಪೊನ್ನಂಪೇಟೆ ತಾಲೂಕು ರಚನೆಗೆ ಕಳೆದ 16 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ರೈತ ಸಂಘ, ಹಳ್ಳಿಗಟ್ಟು ಗ್ರಾಮಸ್ಥರು, ಓಯಸಿಸ್ ಕ್ಲಬ್ ಸದಸ್ಯರು, ಮೂಕಳೇರ ಕುಟುಂಬಸ್ಥರು, ಭಗವತಿ ನಗರ ಕೊಡವ ಕೂಟ, ಚೂರಿಕಾಡ್-ಬಾಡಗ ಕೊಡವ ವೆಲ್‍ಫೇರ್ ಅಸೋಸಿಯೇಷನ್, ಚೋಡುಬೀಟಿ ಕೊಡವ ಕೂಟ, ಟಿ.ಶೆಟ್ಟಿಗೇರಿ ಗ್ರಾ.ಪಂ, ಬಲ್ಯಮೂಂಡೂರು ಗ್ರಾ.ಪಂ, ಪೊನ್ನಂಪೇಟೆ ಗ್ರಾ.ಪಂ, ಕಾವೇರಿ ಅಸೋಸಿಯೇಷನ್ ಕೋಲುಬಾಣೆ ಮಾಯಮುಡಿ, ಹಿರಿಯ ನಾಗರಿಕ ವೇದಿಕೆ ಮತ್ತು ಸಾರ್ವಜನಿಕರು ಪಾಲ್ಗೊಳ್ಳುವದರ ಮೂಲಕ ಬೃಹತ್ ಮಟ್ಟದ ಪ್ರತಿಭಟನೆ ಹಾಗೂ ಮಾನವ ಸರಪಳಿಯನ್ನು ರಚಿಸಿ ವ್ಯವಸ್ಥಿತವಾಗಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ತಾಲೂಕು ಪುನರಚನಾ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿದರು.ಈ ಹಿಂದೆ ಕ್‍ಗ್ಗಟ್ಟ್‍ನಾಡ್ ತಾಲೂಕು ಎಂದು ಕರೆಯಲ್ಪಟ್ಟಿದ್ದ ಪೊನ್ನಂಪೇಟೆ ತಾಲೂಕಿನಲ್ಲಿ ಎಲ್ಲಾ ಮೂಲ ಸೌಕರ್ಯಗಳು ಇದೆ. ಈ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ವಿಷಯವನ್ನು ಪ್ರಸ್ತಾಪಿಸಿ ಇದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆರ್ಥಿಕ ಸಮೀಕ್ಷೆಯನ್ನು ನಡೆಸಿ ಮುಂದಿನ ವಿಷಯದ ಬಗ್ಗೆ ಪ್ರಸ್ತಾಪ ಮಾಡುವದಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದರು.
ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಕಳೆದ ಹಲವು ದಶಕಗಳಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪೊನ್ನಂಪೇಟೆ ತಾಲೂಕು ರಚನೆಯಾಗಲೇಬೇಕಾಗಿದೆ.
ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕು ರಚನೆಯ ಬಗ್ಗೆ ಈಗಾಗಲೆ ಶಾಸಕ ಕೆ.ಜಿ.ಬೋಪಯ್ಯ ಅದಿವೇಶನದಲ್ಲಿ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಹಾಗೂ ಎಂ.ಎಲ್.ಸಿ.ವೀಣಾ ಅಚ್ಚಯ್ಯ ಕಂದಾಯ ಸಚಿವರನ್ನು ಮುಖತಃ ಭೇಟಿಯಾಗಿ ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿದ್ದಾರೆ ಎಂದರು.
ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಗೆ 2001ರಲ್ಲಿ ಉತ್ತಮ ರೀತಿಯಲ್ಲಿ ಜನಸಂಘಟನೆ ಮಾಡುವದರ ಮೂಲಕ ಹೋರಾಟವನ್ನು ನಡೆಸಲಾಯಿತು ಎಂದರು. ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ ಮಾತನಾಡಿದರು.
ಈ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ತಾಲೂಕು ಹೋರಾಟ ಸಮಿತಿಯ ಮಾಜಿ ಕಾರ್ಯದರ್ಶಿ ಸಣ್ಣುವಂಡ ವಿಶ್ವನಾಥ್, ಪೊನ್ನಂಪೇಟೆ ಎಪಿಎಂಸಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಕಾವೇರಿ ಅಸೋಸಿಯೇಷನ್ ಮಾಯಮುಡಿ ಅಧ್ಯಕ್ಷ ಕಾಳಪಂಡ ಸುಧೀರ್, ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್, ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜು ಅಧ್ಯಕ್ಷ ಅಳಮೇಂಗಡ ಬೋಸು ಮಂದಣ್ಣ, ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ ಮುಂತಾದವರು ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಗೆ ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಜಪ್ಪು ಮುತ್ತಪ್ಪ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್.ವೈ.ರಾಮಕೃಷ್ಣ, ಟಿ.ಶೆಟ್ಟಿಗೇರಿ ಗ್ರಾ.ಪಂ. ಸದಸ್ಯರಾದ ಸಂದೀಪ್, ಉದಯ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸಮಿತಾ ಗಣೇಶ್, ಸದಸ್ಯರಾದ ಕಾವ್ಯ ಮಧು, ಮೂಕಳೇರ ಲಕ್ಷ್ಮಣ, ಜಿಲ್ಲಾ ರೈತ ಸಂಘದ ಪ್ರಮುಖರು ಹಾಗೂ ವಿವಿಧ ಸಂಘ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.