ಗೋಣಿಕೊಪ್ಪ ವರದಿ, ನ. 17: ಹೊರ ರಾಜ್ಯಕ್ಕೆ ರಸಗೊಬ್ಬರ ಸಾಗಾಟ ಪ್ರಕರಣಕ್ಕೆ ಸಂಬಂದಿಸಿದಂತೆ ಕುಟ್ಟ ಪೊಲೀಸರು ತಡೆ ಹಿಡಿದಿರುವ ರಸಗೊಬ್ಬರವು ಕೃಷಿ ಇಲಾಖೆ ರಸಗೊಬ್ಬರ ಆದೇಶ ನಿಯಮ ಉಲ್ಲಂಘನೆ ಎಂಬವದು ಕೃಷಿ ಇಲಾಖೆಯಿಂದ ದೃಢಪಟ್ಟಿದ್ದು, ಪೊಲೀಸ್ ಇಲಾಖೆ ಮೂಲಕ ಪ್ರಕರಣ ದಾಖಲಿಸಲು ಕೃಷಿ ಇಲಾಖೆ ಮುಂದಾಗಿದೆ.
ರಸಗೊಬ್ಬರ ಆದೇಶ ನಿಯಮ ಪ್ರಕಾರ ಒಂದು ರಾಜ್ಯಕ್ಕೆ ಎಂದು ನಿಗದಿ ಪಡಿಸಿರುವ ಗೊಬ್ಬರವನ್ನು ಮತ್ತೊಂದು ರಾಜ್ಯಕ್ಕೆ ಸಾಗಾಟ ಮಾಡುವಂತಿಲ್ಲ. ಮಾರಾಟ ಕೇಂದ್ರದಿಂದ ಆಯಾ ತಾಲೂಕಿನ ವ್ಯಾಪ್ತಿಗೆ ಮಾರಾಟ ಮಾಡಲು ಅವಕಾಶವಿದೆ. ಆದರೆ, ಕೊಡಗು ಜಿಲ್ಲಾ ಸಹಕಾರ ಮಾರಾಟ ಮಂಡಲ ನಿಯಮಿತ (ಪೆಢರೇಷನ್) ವತಿಯಿಂದ ಪೊನ್ನಂಪೇಟೆ ಮಾರಾಟ ಕೇಂದ್ರದಿಂದ 200 ಚೀಲಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡಲು ಮುಂದಾಗಿರುವದು ನಿಯಮ ಬಾಹಿರ ಎಂದು ದೃಢÀ ಪಟ್ಟಿದೆ.
ಇದರಂತೆ ಕುಟ್ಟ ಪೊಲೀಸರು ತಾಲೂಕು ಕೃಷಿ ಇಲಾಖೆಗೆ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಕೇಳಿಕೊಂಡಿದ್ದಾರೆ. ಇದರಂತೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೀನಾ ಪ್ರಕಣದ ಬಗ್ಗೆ ಪರಿಶೀಲನೆ ನಡೆಸಿ, ಸಾಗಾಟ ಮಾಡುತ್ತಿರುವದು ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ಮಾರಾಟಗಾರರ ವಿರುದ್ಧ ಎಫ್‍ಐಆರ್ ದಾಖಲು ಮಾಡಲು ಶಿಪಾರಸ್ಸು ಮಾಡಲು ಮುಂದಾಗಿದ್ದಾರೆ.
ತಾ. 14 ರಂದು ಕುಟ್ಟ ಪೊಲೀಸರು ವಶಪಡಿಸಿಕೊಂಡಿರುವ ಗೊಬ್ಬರ ಲಾರಿಯನ್ನು ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕುಟ್ಟ ಪೊಲೀಸ್ ಠಾಣೆ ಎದುರು ನಿಲ್ಲಿಸಲಾಗಿದೆ.
ಹಿನ್ನೆಲೆ : ಪೊನ್ನಂಪೇಟೆ ಶಾಖೆಯಿಂದ ಖಾದÀರ್ ಎಂಬವರು ಖರೀದಿಸಿ ಯೂರಿಯಾವನ್ನು ಲಾರಿ ಮುಖಾಂತರ ಸಾಗಾಟಕ್ಕೆ ಪ್ರಯತ್ನಿಸಿದ್ದರು. ಕುಟ್ಟ ಪೊಲೀಸರು ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ನಡೆಸುವ ಸಂದರ್ಭ ಅಂದಾಜು 60 ಸಾವಿರ ರೂ. ಮೌಲ್ಯದ 200 ಚೀಲ ಯೂರಿಯ ಸಾಗಿಸುತಿದ್ದ ಲಾರಿಯನ್ನು ನಿಯಮ ಬಾಹಿರ ಎಂಬ ಸಂಶಯದಿಂದ ತಡೆ ಹಿಡಿಯಲಾಗಿತ್ತು. ನಂತರ ಪ್ರಕರಣದ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯಿಂದ ಸೂಕ್ತ ವರದಿಗಾಗಿ ಪೊಲೀಸರು ಪ್ರಕರಣವನ್ನು ಕಾಯ್ದಿರಿಸಿದ್ದರು.
ವೀರಾಜಪೇಟೆ : ಮಾರ್ಕೆಟಿಂಗ್ ಫೆಡರೇಶನ್‍ನÀ ಪೊನ್ನಂಪೇಟೆ ಶಾಖೆಯಿಂದ ಹೊರ ರಾಜ್ಯಕ್ಕೆ ಯೂರಿಯ ಗೊಬ್ಬರ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖರೀದಿದಾರರು ವಾಳಕುಳ ಎಸ್ಟೇಟ್‍ನ ಹೆಸರಿನಲ್ಲಿ ರಶೀತಿ ಪಡೆದು ರೂ. 60,000 ನಗದು ಪಾವತಿಸಿದ ಮೇರೆ ಸ್ಥಳೀಯ ಲಾರಿಯ ನಂಬರ್‍ನ್ನು ರಶೀತಿಯಲ್ಲಿ ನಮೂದಿಸಿದ್ದರಿಂದ ಯೂರಿಯಾ ಗೊಬ್ಬರ ನೀಡಲಾಯಿತು. ಯೂರಿಯಾ ಗೊಬ್ಬರವನ್ನು ಕಾನೂನಿನ ಪ್ರಕಾರ ಮಾರಾಟ ಮಾಡಲಾಗಿದೆ ಎಂದು ಫೆಡರೇಶನ್ ಕಾರ್ಯದರ್ಶಿ ಎನ್.ಎಂ.ಲಾಲ ಸ್ಪಷ್ಟ ಪಡಿಸಿದ್ದಾರೆ.
ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಲಾಲ ಅವರು ತಾ. 14ರಂದು ಖಾದರ್ ಎಂಬ ವ್ಯಕ್ತಿ ಎಸ್ಟೇಟ್‍ನ ಹೆಸರು ಹಾಗೂ ಸ್ಥಳೀಯ ಲಾರಿ ಸಂಖ್ಯೆಯನ್ನು ರಶೀತಿಯಲ್ಲಿ ನಮೂದಿಸಿದ್ದರಿಂದ ನಗದು ಪಡೆದು ಗೊಬ್ಬರ ನೀಡಲಾಗಿದೆ. ಇದರಲ್ಲಿ ಯಾವದೇ ದುರುದ್ದೇಶವಿಲ್ಲ. ಈ ಗೊಬ್ಬರ ಕೇರಳಕ್ಕೆ ಸಾಗಾಟವಾಗುತ್ತದೆ ಎನ್ನುವದು ನಮಗೆ ಗೊತ್ತಾಗಿಲ್ಲ. ಕುಟ್ಟದ ಎಸ್ಟೇಟ್ ಹೆಸರು ತೋರಿಸಿದ್ದರಿಂದ ಯಾವದೇ ಸಂಶಯ ಉಂಟಾಗಿಲ್ಲ. ಮಾರ್ಕೆಟಿಂಗ್ ಫೆಡರೇಶನ್‍ಗೆ ಈ ಬಾರಿ ಒಟ್ಟು 16 ಲೋಡ್‍ಗಳಷ್ಟು ಗೊಬ್ಬರ ಬಂದಿದ್ದು, ಎಲ್ಲವನ್ನು ಕಾನೂನು ಬದ್ಧವಾಗಿ ಮುಕ್ತವಾಗಿ ಬೆಳೆಗಾರರಿಗೆ ವಿಲೇವಾರಿ ಮಾಡಲಾಗಿದೆ. ಈಗಿನ ಹವಾಮಾನದ ವೈಫÀರೀತ್ಯದಿಂದಾಗಿ ಗೊಬ್ಬರದ ಬೇಡಿಕೆಯೂ ಇಳಿ ಮುಖವಾದ ಹಿನ್ನೆಲೆಯಲ್ಲಿ ಒಬ್ಬರಿಗೆ ಹತ್ತು ಟನ್ ಗೊಬ್ಬರ ಮಾರಾಟ ಮಾಡಲಾಗಿದೆ. ಈ ಪೈಕಿ ಒಂದು ಲಾರಿ ಲೋಡ್ ಗೊಬ್ಬರ ದಾಸ್ತಾನು ಕೊಠಡಿಯಲ್ಲಿಯೇ ಉಳಿದಿದೆ.
ದಕ್ಷಿಣ ಕೊಡಗಿನ ರೈತರು ಆರೋಪಿಸಿರುವಂತೆ ಫೆಡರೇಶನ್‍ನಿಂದ ಯೂರಿಯಾ ಗೊಬ್ಬರವನ್ನು ಕೇರಳಕ್ಕೆ ಮಾರಾಟ ಮಾಡಿಲ್ಲ. ಗೊಬ್ಬರ ಮಾರಾಟ ಮಾಡಿರುವದಕ್ಕೆ ಎಲ್ಲ ದಾಖಲೆಗಳು ಕಚೇರಿಯಲ್ಲಿವೆ ಎಂದು ಮಾರಾಟ ವ್ಯವಸ್ಥಾಪಕ ಜಿ.ಪಿ.ಅಪ್ಪಣ್ಣ ಹೇಳಿದರು.