ಕುಶಾಲನಗರ, ನ. 17: ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಕೊಡಗು ಪೊಲೀಸ್ ಸದಾ ಸನ್ನದವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಕೂಡಿಗೆಯ ರಾಮೇಶ್ವರ ಸಭಾಂಗಣದಲ್ಲಿ ಕುಶಾಲನಗರದ ಡಿವೈಎಸ್ಪಿ ಸಂಪತ್P Àುಮಾರ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಶಕ್ತಿ ಮೀರಿ ಕರ್ತವ್ಯ ನಿಭಾಯಿಸುತ್ತಿದ್ದು ಈ ಸಂದರ್ಭ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಕಳೆದ 1 ವರ್ಷ ಅವಧಿಯಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಡಿವೈಎಸ್ಪಿ ಸಂಪತ್ ಕುಮಾರ್ ಅವರ ಕಾರ್ಯವೈಖರಿಯನ್ನು ರಾಜೇಂದ್ರ ಪ್ರಸಾದ್ ಶ್ಲಾಘಿಸಿದರು. ಸಮಾರಂಭದಲ್ಲಿ ಪೊಲೀಸ್ ಇಲಾಖಾ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು ಸಂಪತ್ ಕುಮಾರ್ ಅವರಿಗೆ ಗೌರವಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ. ಚಂದ್ರಕಲಾ, ಮಂಜುಳಾ ಮತ್ತಿತರ ಪ್ರಮುಖರು ಸಂಪತ್ ಕುಮಾರ್ ಅವರ ಸೇವೆ ಬಗ್ಗೆ ಮಾತನಾಡಿ ಶುಭ ಕೋರಿದರು. ಇದೇ ಸಂದರ್ಭ ನೂತನವಾಗಿ ನೇಮಕ ಗೊಂಡ ಡಿವೈಎಸ್ಪಿ ಮುರಳೀಧರ್ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭ ಮಡಿಕೇರಿ ಡಿವೈಎಸ್ಪಿ ಸುಂದರ್ರಾಜ್, ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸಮಾರಂಭದಲ್ಲಿ ಇದ್ದರು. ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್ ಕಾರ್ಯಕ್ರಮ ನಿರೂಪಿಸಿ, ವೃತ್ತ ನಿರೀಕ್ಷಕ ಕ್ಯಾತೆಗೌಡ ಸ್ವಾಗತಿಸಿ, ನಗರ ಠಾಣಾಧಿಕಾರಿ ಜಗದೀಶ್ ವಂದಿಸಿದರು.