ಚೆಟ್ಟಳ್ಳಿ, ನ. 17: ಮಡಿಕೇರಿ ಸಮೀಪದ ಹೊಸ್ಕೇರಿಯಲ್ಲಿ ನಡುರಾತ್ರಿ ಕಳ್ಳರು ಗಂಧದ ಮರವನ್ನು ಕಳವುಮಾಡಲು ಯತ್ನಿಸಿ ಮಾಲಿಕರನ್ನು ಕಂಡು ಓಡಿದ ಘಟನೆ ನಡೆದಿದೆ.ಚೆಟ್ಟಳ್ಳಿ ಪೊಲೀಸ್ ಠಾಣೆಗೆ ಒಳಪಡುವ ಹೊಸ್ಕೇರಿ ಅರೆಕಾಡು- ಪಂಚಾಯಿತಿ ವ್ಯಾಪ್ತಿಯ ಹೊಸ್ಕೇರಿಯ ಮುಕ್ಕಾಟಿ ಜಾನಕಿ ಎಂಬವರಿಗೆ ಸೇರಿದ ಮನೆಯ ಮುಂದಿನ ಜಾಗದಲ್ಲಿ ಸುಮಾರು 25 ವರ್ಷಗಳ ಹಳೆಯದಾದ ಗಂಧದಮರವನ್ನು ತುಂಡರಿಸಿ ಹೊತ್ತೊಯ್ಯಲು ಎರಡು ದಿನಗಳ ಹಿಂದೆ 1.45 ಗಂಟೆಗೆ ಕಳ್ಳರು ಪ್ರಯತ್ನಿಸುತ್ತಿದ್ದರು. ಮರ ಬಿದ್ದ ಸದ್ದಿಗೆ ಎಚ್ಚರಗೊಂಡ ಜಾನಕಿಯವರ ಮೈದುನ ಮುಕ್ಕಾಟಿ ಜಗದೀಶ್ ಕೋಣೆಯಿಂದ ಹೊರಬಂದು ಟಾರ್ಚ್‍ಲೈಟನ್ನು ಹಾಕಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಕಳ್ಳರು ಮರವನ್ನು ಬಿಟ್ಟು ತೋಟದೊಳಕ್ಕೆ ಓಡಿದ್ದಾರೆ.

ಚೆಟ್ಟಳ್ಳಿ ಪೊಲೀಸ್ ಹೆಡ್‍ಕಾನ್ಸ್‍ಟೇಬಲ್ ಪ್ರಕಾಶ್ ಸಿಬ್ಬಂದಿ ಹಾಗೂ ಮೂರ್ನಾಡು ಅರಣ್ಯಾಧಿಕಾರಿಗಳು ಮಹಜರು ನಡೆಸಿ ಗಂಧದ ಮರವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.