ಒಡೆಯನಪುರ, ನ. 16: ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಸಮಸ್ಯೆಯನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಶಿವಪ್ರಕಾಶ್ ಅಭಿಪ್ರಾಯ ಪಟ್ಟರು. ಸಮೀಪದ ನಿಡ್ತ ಸರಕಾರಿ ಸಂಯುಕ್ತ ಪ್ರೌಢಶಾಲೆ ಸಭಾಂಗಣದಲ್ಲಿ ಚಿಕ್ಕ ಅಳುವಾರದ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗ (ಎಂಎಸ್‍ಡಬ್ಲ್ಯೂ) ಹಾಗೂ ನಿಡ್ತ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ಅಪೌಷ್ಟಿಕತೆ ಸಮಸ್ಯೆ ಕುರಿತು ಉಪನ್ಯಾಸ ನೀಡಿದರು. ಇಂದು ಆಹಾರ ಪದ್ಧತಿಯಲ್ಲಿ ಬದಲಾವಣೆ, ಸಮತೋಲನ, ಆಹಾರ ಸೇವನೆಯಲ್ಲಿ ವ್ಯತ್ಯಾಸ ಮುಂತಾದ ಆಹಾರ ಸಮತೋಲನೆಯ ಕೊರತೆಯಿಂದಾಗಿ ಅಪೌಷ್ಟಿಕತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದರು. ನಮ್ಮ ದೇಶದಲ್ಲಿ ಶೇ. 35 ರಷ್ಟು ಜನರು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ, ಮಕ್ಕಳು ಜನಿಸುವಾಗಲೇ ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ ಗರ್ಭಿಣಿ ಸ್ತ್ರೀಯರು ಅಪೌಷ್ಟಿಕತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದರಿಂದ ಶಿಶು ಮರಣದ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.