ವೀರಾಜಪೇಟೆ, ನ. 17: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆಬಿದ್ದ ಕಾರಣ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಭಾಗದ ಗ್ರಾಮೀಣ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿದ್ದು, ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಂದ ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು ಹಾಗೂ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಲ್ಲಿ ಸ್ಥಳೀಯ ಗ್ರಾಮಸ್ಥರುಗಳು ನಿಗಾವಹಿಸಬೇಕು ಎಂದು ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಹೇಳಿದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯಿಂದ ಚೆನಿಯಪಂಡ ಕುಟುಂಬಸ್ಥರ ಗದ್ದೆಯ ಮೂಲಕ ಗುಂಡಿಗೆರೆ ಗ್ರಾಮಕ್ಕೆ ಹೋಗುವ ರಸ್ತೆ ಹಾಗೂ ಗ್ರಾಮದ ಇತರ ರಸ್ತೆಗಳ ಅಭಿವೃದ್ಧಿಗಾಗಿ ಕೊಡಗು ವಿಶೇಷ ಪ್ಯಾಕೇಜ್ ಅನುದಾನದಲ್ಲಿ ರೂ. 60 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಮಾತನಾಡಿ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೆದಮುಳ್ಳೂರು ಗ್ರಾಮದ ಈಶ್ವರ ದೇವಸ್ಥಾನ ಅಭಿವೃದ್ಧಿಗೆ ರೂ. 5 ಲಕ್ಷ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ಕೆದಮುಳ್ಳೂರು ಗ್ರಾಮದ ಚಾಮುಂಡಿ ದೇವಸ್ಥಾನ ಅಭಿವೃದ್ದಿಗೆ ರೂ. 3 ಲಕ್ಷ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದ ಕೆದಮುಳ್ಳೂರು ಗ್ರಾಮದ ಧವಸ ಭಂಡಾರ ಸಮುದಾಯ ಭವನಕ್ಕೆ ರೂ. 3 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ಕಾಂಗ್ರೆಸ್ ಮುಖಂಡರಾದ ಪಿ.ಕೆ. ಪೊನ್ನಪ್ಪ, ಟಾಟು ಮೊಣ್ಣಪ್ಪ, ನಡಿಕೇರಿಯಂಡ ಮಹೇಶ್, ಮಾಳೇಟಿರ ಕಾಶಿ ಕುಂಞಪ್ಪ, ಆರ್.ಎಂ.ಸಿ. ಸದಸ್ಯ ಮಾಳೇಟಿರ ಬೋಪಣ್ಣ, ಮಾಳೇಟಿರ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಅಮ್ಮಣಿಚಂಡ ಪ್ರವೀಣ್ ಇಸ್ಮಾಯಿಲ್, ಕೊಟ್ಟಂಗಡ ರಾಧ, ಬೋಜಮ್ಮ, ತೇಜಾ, ವಲಯ ಅಧ್ಯಕ್ಷರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.