ಮಡಿಕೇರಿ ನ.17 : ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ಹಾಕಿ ಕೊಡಗು ಸಂಸ್ಥೆಯ ಸಹಯೋಗದೊಂದಿಗೆ ತಾ. 21 ರಿಂದ 26 ರವರೆಗೆ 5ನೇ ಜಿಲ್ಲಾ ಮಟ್ಟದ ನಾಕೌಟ್ ಹಾಕಿ ಪಂದ್ಯಾವಳಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಮೇವಡ ಚಿಣ್ಣಪ್ಪ ಕಾಕೋಟುಪರಂಬು ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಈಗಾಗಲೇ 21 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ ಎಂದರು. ಅಂತಿಮ ಪಂದ್ಯ ತಾ. 26ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ತಾ. 21 ರಂದು ಬೆಳಿಗ್ಗೆ 10 ಗಂಟೆಗೆ ಪಂದ್ಯಾವಳಿ ಉದ್ಘಾಟಿಸಲಿದ್ದು, ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ಪೊನ್ನಪ್ಪ ಆರಂಭಿಕ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದುರ್ಗಬೋಜಿ ಗ್ರೂಪ್ಸ್‍ನ ಮಾಲೀಕ ಗುಮ್ಮಟ್ಟಿರ ಎಸ್. ಕಿಲನ್ ಗಣಪತಿ ಹಾಗೂ ಹಾಕಿ ಕೊಡಗು ಸಂಸ್ಥೆಯ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿ ತಂಡದಲ್ಲಿ ಐವರು ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿದ್ದು, ಅಂತರ್ರಾಷ್ಟ್ರೀಯ ಮಟ್ಟದ ಅತಿಥಿ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಒಟ್ಟು 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿಗಳನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ ಎಂದು ಮೇವಡ ಚಿಣ್ಣಪ್ಪ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂಎಲ್‍ಸಿ ಸುನಿಲ್ ಸುಬ್ರಮಣಿ, ಎಸ್‍ಪಿ ರಾಜೇಂದ್ರ ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷÀ ಮುಕ್ಕಾಟಿರ ಶಿವು ಮಾದಪ್ಪ, ವಿಜೇತ ತಂಡಕ್ಕೆ ನಗದು ಬಹುಮಾನ ನೀಡುತ್ತಿರುವ ವೀರಾಜಪೇಟೆ ಕ್ಲಬ್ ಮಹೀಂದ್ರದ ಮುಖ್ಯಸ್ಥ ಮಹೇಶ್ ಎಂ.ಎಸ್. ವಿಜೇತ ತಂಡಕ್ಕೆ ಬಹುಮಾನವನ್ನು ನೀಡುತ್ತಿರುವ ಅರೆಯಡ ಪವಿನ್ ಪೆÀÇನ್ನಣ್ಣ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಪಾರಿತೋಷಕ ನೀಡುತ್ತಿರುವ ಅಡ್ಡೆಂಗಡ ತೇಜ ನಂಜಪ್ಪ, ಉದ್ಯಮಿ ಕೇಶವ ಪ್ರಸಾದ್ ಮುಳಿಯ, ಹಾಕಿ ಕೊಡಗು ಸಂಸ್ಥೆಯ ತಾಂತ್ರಿಕ ಸಮಿತಿ ಅಧ್ಯಕ್ಷ ಬುಟ್ಟಿಯಂಡ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ರಕ್ತದಾನ ಶಿಬಿರ

ಪಂದ್ಯಾವಳಿ ಉದ್ಘಾಟನೆಯ ದಿನವಾದ ತಾ. 21 ರಂದು ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮೇವಡ ಚಿಣ್ಣಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಉಪಾಧ್ಯಕ್ಷ ಐಚೆಟ್ಟೀರ ಮೋಹನ್, ನಿರ್ದೇಶಕರುಗಳಾದ ಪಳೆಯಂಡ ರಾಬಿನ್ ದೇವಯ್ಯ ಹಾಗೂ ಸದಸ್ಯ ಐಚೆಟ್ಟೀರ ಅರುಣ್ ಚಂಗಪ್ಪ ಉಪಸ್ಥಿತರಿದ್ದರು.