ಗೋಣಿಕೊಪ್ಪ ವರದಿ, ನ. 17: ಕೊಡಗಿನಲ್ಲಿ ಸಹಕಾರಿ ಕ್ಷೇತ್ರ ಪರಸ್ಪರ ನಂಬಿಕೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹನೀಯರು ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಾಮಂಡಳ ನಿರ್ದೇಶಕ ಮನು ಮುತ್ತಪ್ಪ ಅಭಿಪ್ರಾಯಪಟ್ಟರು.

64 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಅಮ್ಮತ್ತಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಖಾಸಗಿ ಸಹಕಾರಿ ಸಹಭಾಗಿತ್ವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಸ್ವಾರ್ಥ ಸೇವೆ ಮೂಲಕ ಸಹಕಾರಿ ಕ್ಷೇತ್ರ ಯುವಪೀಳಿಗೆಯನ್ನು ತನ್ನತ್ತ ಸೆಳೆಯುವಂತಾಗಬೇಕು ಎಂದು ಹೇಳಿದರು.

ಜಮೀನ್ದಾರ್ ಸಂಘ ಹುಟ್ಟಿಗೆ ಕಾರಣಕರ್ತರಾದ ಪಂದ್ಯಂಡ ಬೆಳ್ಯಪ್ಪ ಹಾಗೂ ಕೊಡಗಿನ ಮೊದಲ ರಿಜಿಸ್ಟಾರ್ ಪಂದಿಕುತ್ತೀರ ಚಂಗಪ್ಪ ಅವರುಗಳು ಕೊಡಗಿನಲ್ಲಿ ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಿ ಅಪಾರ ಕೊಡುಗೆ ನೀಡಿದ್ದಾರೆ. ಯುವಜನತೆಗೆ ಇವರ ಸಾಧನೆ ಸ್ಫೂರ್ತಿಯಾಗಬೇಕು ಎಂದರು.

ದಶಕಗಳ ಹಿಂದೆ ಕೊಡಗಿನಲ್ಲಿ ಸಹಕಾರಿಗಳಿಗೆ ಅತ್ಯುತ್ತಮ ಗೌರವ ನೀಡಲಾಗುತ್ತಿತ್ತು. ಸಾಧಕರನ್ನು ಗುರುತಿಸಿ ಸಾಂಪ್ರದಾಯಿಕ ವಾಲಗದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮೂಲಕ ಗೌರವ ನೀಡುತ್ತಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಸಮಯದ ಅಭಾವ ಹಾಗೂ ಆಧುನಿಕ ಜೀವನ ಶೈಲಿಯ ನಡುವೆ ನಾವು ಸಾಧಕರನ್ನು ಮರೆತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.