ಚಿತ್ರ ವರದಿ : ವಾಸು ಎ.ಎನ್ ಸಿದ್ದಾಪುರ, ನ. 17 : ಜಾನುವಾರುಗಳ ಮೇಲೆ ಹುಲಿಯೊಂದು ಧಾಳಿ ನಡೆಸಿ ಕೊಂದಿರುವ ಘಟನೆ ಮಾಲ್ದಾರೆಯಲ್ಲಿ ನಡೆದಿದೆ.ಮಾಲ್ದಾರೆ ಗ್ರಾಮದ ನಿವಾಸಿ ಹಾಗೂ ಗ್ರಾ.ಪಂ. ಸದಸ್ಯೆ ಇಂದಿರಾ ಎಂಬವರಿಗೆ ಸೇರಿದ ಎರಡು ಗರ್ಭಿಣಿ ಹಸುಗಳು ಗುರುವಾರದಂದು ಮೇವನ್ನರಸಿಕೊಂಡು ಸಮೀಪದ ಖಾಸಗಿ ತೋಟಕ್ಕೆ ತೆರಳಿತ್ತು ಎನ್ನಲಾಗಿದೆ. ರಾತ್ರಿಯಾದರೂ ಹಸುಗಳು ಬಾರದ ಹಿನ್ನೆಲೆಯಲ್ಲಿ ಹುಡುಕಿಕೊಂಡು ಮಾಲ್ದಾರೆಯ ಜೋಸ್ ಕುರಿಯನ್ ಎಂಬವರ ತೋಟದೊಳಗೆ ತೆರಳಿದ ಸಂದರ್ಭ ಹುಲಿಯ ಹೆಜ್ಜೆ ಪತ್ತೆಯಾಗಿದೆ. ನಂತರ ಇದೇ ಸಂದÀರ್ಭ ಗಸ್ತು ತಿರುಗುತ್ತಿದ್ದ ತೋಟದ ವ್ಯವಸ್ಥಾಪಕರು ಹಸುವಿನ ಸಾವಿನ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇಂದಿರಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಾಣೆಯಾಗಿದ್ದ ಹಸುಗಳು ಸಾವನಪ್ಪಿರುವದು ಪತ್ತೆಯಾಯಿತು.
ಹುಲಿ ಒಂದು ಹಸುವನ್ನು ರಾತ್ರಿ ಸಮಯದಲ್ಲಿ ಧಾಳಿ ನಡೆಸಿ ಕೊಂದಿರುವ ಕುರುಹು ಕಂಡು ಬಂದಿದ್ದು ಇನ್ನೊಂದು ಹಸುವನ್ನು ಬೆಳಗ್ಗಿನ ಜಾವ ಬೇಟೆಯಾಡಿ ಸಾಯಿಸಿರುವದು ರಕ್ತ ಸ್ರಾವದಿಂದ ತಿಳಿದುಬಂದಿದೆ. ತುಂಬಿದ ಗರ್ಭ ಹೊಂದಿದ್ದ ಹಸುಗಳೆರಡೂ ಸಾವನಪ್ಪಿದ ಹಿನ್ನೆಲೆಯಲ್ಲಿ ಇಂದಿರಾ ಅವರಿಗೆ ಅಪಾರ ನಷ್ಟ ಸಂಭವಿಸಿದೆ. ಬ್ಯಾಂಕ್ ಮುಖಾಂತರ ಸಾಲ ಪಡೆದು ಹಸುಗಳನ್ನು ಖರೀದಿಸಿದ್ದು, ಇದೀಗ ಹಸುಗಳೆರಡು ಸಾವನಪ್ಪಿರುವ ಹಿನ್ನೆಲೆಯಲ್ಲಿ ಇಂದಿರಾ ಕಂಗಾಲಾಗಿದ್ದಾರೆ ಸ್ಥಳಕ್ಕೆ ತಿತಿಮತಿ ಎ.ಸಿ.ಎಫ್. ಶ್ರೀಪತಿ ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದÀರ್ಭದಲ್ಲಿ ಶಕ್ತಿಯೊಂದಿಗೆ ಮಾತನಾಡಿದ ಅವರು ಹುಲಿ ಧಾಳಿಯಿಂದ ಸಾವನಪ್ಪಿದ ಜಾನುವಾರುಗಳ ಮಾಲೀಕರಿಗೆ ಅರಣ್ಯ ಇಲಾಖೆಯ ವತಿಯಿಂದ ದಯಾತ್ಮಕ ಪರಿಹಾರವನ್ನು ನೀಡಲಾಗುವದೆಂದರು. ಹುಲಿಯು ಧಾಳಿ ನಡೆಸಿ ಮೃತಪಟ್ಟ ಜಾನುವಾರುಗಳ ಪೈಕಿ ಒಂದು ಜಾನುವಾರುವಿನ ಮೃತದೇಹವನ್ನು ಸ್ಥಳದಲ್ಲೇ ಇರಿಸಿ ಕಾಫಿ ತೋಟದಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಹುಲಿಯ ಚಲನ-ವಲನಗಳನ್ನು ಪತ್ತೆಹಚ್ಚಿ ಬಳಿಕ ಹುಲಿಯನ್ನು ಸೆರೆಹಿಡಿಯಲು ಬೋನು ಇರಿಸಲಾಗುವದೆಂದು ಮಾಹಿತಿ ನೀಡಿದರು. ಅಲ್ಲದೆ ಸಿಬ್ಬಂದಿಗಳನ್ನು ಹುಲಿಯ ಚಲನ ವಲನಗಳನ್ನು ಕಂಡುಹಿಡಿಯಲು ಸ್ಥಳದಲ್ಲೇ ಹಗಲು ರಾತ್ರಿ ಗಸ್ತು ತಿರುಗಲು ನೇಮಿಸಲಾಗುವದೆಂದರು.
ಕಳೆದ ಕೆಲವು ತಿಂಗಳ ಹಿಂದೆ ಬಾಡಗ ಬಾಣಂಗಾಲದ ಮೈಲಾತ್ ಪುರ ಕಾಫಿ ತೋಟದಲ್ಲಿ 5 ಕ್ಕೂ ಅಧಿಕ ಜಾನುವಾರುಗಳನ್ನು ಸಾಯಿಸಿದ ಹುಲಿ ಹಾಗೂ ಇದೀಗ ಎರಡು ಹಸುಗಳನ್ನು ಸಾಯಿಸಿದ ಹುಲಿಗೂ ಸಾಮ್ಯತೆ ಇದೆ ಎಂಬ ಶಂಕೆ ಮೇಲ್ನೋಟಕ್ಕೆ ಕಂಡುಬಂದಿದೆ. ಇದೇ ಸಂದÀರ್ಭದಲ್ಲಿ ಹುಲಿಯು ಜನವಸತಿ ಪ್ರದೇಶದಲ್ಲಿ ಓಡಾಡಿರುವ ಹೆಜ್ಜೆಗುರುತುಗಳನ್ನು ಅರಣ್ಯಾಧಿಕಾರಿಗಳು ಗಮನಿಸಿದರು ಅಲ್ಲದೆ ಈ ಭಾಗದಲ್ಲಿ ಕಾಡಾನೆಗಳ ಉಪಟಳದ ನಡುವೆ ಇದೀಗ ಹುಲಿಯ ಧಾಳಿಯಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಂದÀರ್ಭ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ನಾಗೇಶ್ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಹಾಜರಿದ್ದರು.