ಸೋಮವಾರಪೇಟೆ, ನ. 19: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿ ಶೇ. 7.25 ಹಾಗೂ 24.10 ಅನುದಾನ ಹಂಚಿಕೆಯಲ್ಲಿ ಪ.ಪಂ. ವ್ಯಾಪ್ತಿಯ 24 ಮಂದಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ವಿತರಿಸಲಾಯಿತು. ಪ.ಪಂ. ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಹಾಗೂ ಸದಸ್ಯರುಗಳು ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಿದರು. ಶೇ. 7.25 ಅನುದಾನದಡಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 15 ಮಂದಿ ಹಾಗೂ ಶೇ. 24.10 ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ 9 ಮಂದಿ ಫಲಾನುಭವಿ ಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲಾಗಿದೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್, ಸದಸ್ಯರುಗಳಾದ ಸುಶೀಲಾ, ಶೀಲಾ ಡಿಸೋಜ, ವೆಂಕಟೇಶ್, ಆದಂ, ಬಿ.ಎಂ. ಸುರೇಶ್, ಲೀಲಾ ನಿರ್ವಾಣಿ, ಮೀನಾಕುಮಾರಿ, ಈಶ್ವರ್, ನಾಗರಾಜು, ಉದಯಶಂಕರ್, ಇಂದ್ರೇಶ್, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.