ಸೋಮವಾರಪೇಟೆ, ನ. 19: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ನಬಾರ್ಡ್, ಓಡಿಪಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಸ್ತಿರ ಅಭಿವೃದ್ಧಿ ಯೋಜನೆಯಡಿ ಇಲ್ಲಿನ ಭುವನ ಮಂದಾರ ರೈತ ಉತ್ಪಾದಕರ ಕೇಂದ್ರದಲ್ಲಿ ಕೃಷಿಕರಿಗೆ ಮಣ್ಣಿನ ಸಂರಕ್ಷಣೆ ಮತ್ತು ಕಾಫಿ ಗಿಡಗಳ ಕೀಟ ಬಾಧೆ ನಿಯಂತ್ರಣ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತಿ ಕಾರ್ಯಾಗಾರದಲ್ಲಿ ದೊಡ್ಡಮಳ್ತೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಹಾಗೂ ಅಬ್ಬೂರುಕಟ್ಟೆ ಜಲಾನಯನ ಪ್ರದೇಶದ 16 ಗ್ರಾಮಗಳಿಂದ 80ಕ್ಕೂ ಅಧಿಕ ಮಂದಿ ಕೃಷಿಕರು ಭಾಗವಹಿಸಿದ್ದರು.
ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಶಿವಪ್ರಸಾದ್, ರಂಜಿತ್ ಕುಮಾರ್ ಭಾಗವಹಿಸಿ ರೈತರಿಗೆ ತರಬೇತಿ ನೀಡಿದರು. ಅಬ್ಬೂರುಕಟ್ಟೆ ಜಲಾನಯನ ಪ್ರದೇಶದ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಹಾರೋಹಳ್ಳಿ ಕೇಂದ್ರದ ವಸಂತ್ಕುಮಾರ್,
ಓಡಿಪಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಅಣ್ಣಮ್ಮ, ಸಿಇಓ ದಯಾನಂದ್, ಕ್ಷೇತ್ರಾಧಿಕಾರಿ ಭುವನೇಶ್ ಸೇರಿದಂತೆ ಇತರರು ಕಾರ್ಯಕ್ರಮ ಸಂಘಟಿಸಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕೃಷಿಕರಿಗೆ ಕಾಫಿ ತೋಟಗಳಲ್ಲಿ ಕಂಡುಬರುವ ಕೀಟ ಬಾಧೆಯನ್ನು ನಿಯಂತ್ರಿಸುವ ಕ್ಲೋರೋ ಫೈರಿಪಾಸ್ ಔಷಧಿಯನ್ನು ಉಚಿತವಾಗಿ ವಿತರಿಸಲಾಯಿತು.