ಸುಂಟಿಕೊಪ್ಪ, ನ. 19: ಮಾದಾಪುರ ಗ್ರಾಮ ಪಂಚಾಯಿತಿಯ ಪಿಡಿಓ ಹಾಗೂ ಲೆಕ್ಕಾಧಿಕಾರಿ ವರ್ಗಾವಣೆಗೊಂಡಿದ್ದು, ಇದೀಗ ಗರ್ವಾಲೆ ಪಂಚಾಯಿತಿಯ ಪಿಡಿಓ ಅವರಿಗೆ ಹೆಚ್ಚುವರಿಯಾಗಿ ಮಾದಾಪುರ ಪಂಚಾಯಿತಿ ಪಿಡಿಓ ಹುದ್ದೆ ನೀಡಲಾಗಿದೆ ಪಂಚಾಯಿತಿ ಅಭಿವೃದ್ಧಿ ದೃಷ್ಟಿಯಿಂದ ಶಾಶ್ವತವಾಗಿ ಪಿಡಿಓ ಅವರನ್ನು ಸರಕಾರ ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾದಾಪುರ ಪಂಚಾಯಿತಿಯಲ್ಲಿ ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆದಿಲ್ಲ, ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿ ಜಿ.ಪಂ. ಸದಸ್ಯರ ತಾ.ಪಂ., ಗ್ರಾ.ಪಂ.ನ ಕೋರ್ ಸಮಿತಿಯಲ್ಲಿ ಅಂತಿಮಪಟ್ಟಿ ಆಖೈರು ಮಾಡಬೇಕಾಗಿದೆ. ಆದರೆ ಈ ಪಂಚಾಯಿತಿಯಲ್ಲಿ ಮಾಸಿಕ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆದಿದ್ದು, ಪಂಚಾಯತ್ ರಾಜ್, ಗ್ರಾಮ ಸ್ವರಾಜ್ ಕಾಯ್ದೆ ಪ್ರಕಾರ ಸರಿಯಲ್ಲ. ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ಮಾತು ಕೇಳಿ ಬರುತ್ತಿದೆ ಎಂದು ಸೋಮವಾರಪೇಟೆ ತಾ.ಪಂ. ಮಾಸಿಕ ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ತಿಳಿಸಿದ್ದು ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಸಿದರು.

ಈ ಎಲ್ಲಾ ಬೆಳವಣಿಗೆಯಿಂದ ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಹಾಗೂ ಲೆಕ್ಕಾಧಿಕಾರಿ ಅವರು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ತೆರಳಿದ್ದಾರೆ. ಮಾದಾಪುರ ಗ್ರಾಮ ಪಂಚಾಯಿತಿಯ ದಿನನಿತ್ಯದ ಕೆಲಸ ಕಾರ್ಯಗಳಿಗೆ ಇದರಿಂದ ತೊಡಕಾಗಿದ್ದು ಕಾರ್ಯದರ್ಶಿ, ಲೆಕ್ಕಾಧಿಕಾರಿಗಳ ಖಾಯಂ ನೇಮಕ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.