ಮಡಿಕೇರಿ, ನ. 19: ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೊಡಗಿನ ಮೂಲದ ಖೈದಿಯೊಬ್ಬ, ಮೈಸೂರು ಕಾರಾಗೃಹದೊಳಗೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಿನ್ನೆ ಬೆಳಗ್ಗಿನ ಜಾವ ಸಂಭವಿಸಿದೆ. ಚೆಟ್ಟಳ್ಳಿ ಸಮೀಪದ ಮಲಕೋಡು ಪೈಸಾರಿ ನಿವಾಸಿ ಬೆಟ್ಟ ಕುರುಬರ ಮಣಿ (29) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿ ಸಾವಿಗೀಡಾದ ಖೈದಿ.

ಈತ ತನ್ನ ಪತ್ನಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಮೂರು ವರ್ಷಗಳಿಂದ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಇತ್ತೀಚೆಗೆ ಖಿನ್ನತೆಯಿಂದ ಇದ್ದ ಖೈದಿ ಮಣಿ ತಾ. 17ರಂದು ಮಧ್ಯಾಹ್ನ ಕಾರಾಗೃಹದೊಳಗೆ ಸಣ್ಣ ಗುಡಿ ಕೈಗಾರಿಕೆಯೊಂದರಲ್ಲಿದ್ದ ಕೆಮಿಕಲ್ ಸೇವಿಸಿ ಅಸ್ವಸ್ಥಗೊಂಡಿದ್ದು, ಅಲ್ಲಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ತಾ. 18ರ ಬೆಳಗ್ಗಿನ ಜಾವ 4.30ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿದ್ದು, ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖೈದಿ ಕಾರಾಗೃಹದಲ್ಲಿ ಸಾವಿಗೆ ಯತ್ನಿಸಿ ಸಾವನ್ನಪ್ಪಿರುವ ಪ್ರಕರಣ ಸಂಬಂಧ ನ್ಯಾಯಾಂಗ ಅಧಿಕಾರಿಗಳು ತನಿಖೆ ನಡೆಸಿ, ಬಳಿಕ ಪೊಲೀಸರಿಗೆ ಸಲ್ಲಿಸುವ ವರದಿ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಗೊತ್ತಾಗಿದೆ. ಈತನ ಶವ ಸಂಸ್ಕಾರವು ಮೃತನ ತಂದೆ ಚೋಮ ಹಾಗೂ ಬಂಧುಗಳ ಸಮ್ಮುಖದಲ್ಲಿ ನಿನ್ನೆ ಸಂಜೆ ಮೈಸೂರು ಹರಿಶ್ಚಂದ್ರ ಘಾಟ್‍ನಲ್ಲಿ ಪೊಲೀಸರ ನೆರವಿನಿಂದ ಜರುಗಿದೆ. ವಾರದ ಹಿಂದೆ ಕಿಡ್ನಿ ವೈಫಲ್ಯದಿಂದ ಶಿವಮೊಗ್ಗ ಮೂಲದ ಖೈದಿ ಹಮೀದ್ ಎಂಬಾತ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಕಾರಾಗೃಹದಿಂದ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಮೃತಪಟ್ಟಿದ್ದಾಗಿ ಮಂಡಿಮೊಹಲ್ಲಾ ಪೊಲೀಸ್ ಇನ್ಸ್‍ಪೆಕ್ಟರ್ ಅನ್ಸಾರ್ ಆಲಿ ಖಚಿತಪಡಿಸಿದ್ದಾರೆ.