ಶ್ರೀಮಂಗಲ, ನ. 19: ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಸಂಘಟನೆ ವತಿಯಿಂದ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಫೀ.ಮಾ. ಕೆ.ಎಂ.ಕಾರ್ಯಪ್ಪ ಅವರಿಗೆ ಇದೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲು ಹಾಗೂ ಜಿಯೋ ಪಾರ್ಸಿ ಜನಾಂಗಕ್ಕೆ ನೀಡಿದಂತೆ ಅಲ್ಪ ಸಂಖ್ಯಾತ ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಹಾಗೂ ಜಿಲ್ಲೆಯ ಬೆಳೆಗಾರರ ಹಿತ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿ ಚರ್ಚಿಸಲಾಯಿತು.

ಜನರಲ್ ತಿಮ್ಮಯ್ಯ ಅವರ ಹೆಸರಿನಲ್ಲಿ ವಿಶೇಷ ಅಂಚೆ ಚೀಟಿ ಕೇಂದ್ರ ಸರಕಾರ ತರಬೇಕು. ವಿಯೆಟ್ನಾಂ ದೇಶದಿಂದ ಕಳಪೆ ಕರಿಮೆಣಸು ದೇಶಕ್ಕೆ ಆಮದಾಗುವ ಮೂಲಕ ಕರಿಮೆಣಸು ದರ ಭಾರೀ ಕುಸಿತ ಕಂಡಿದ್ದು, ಕೊಡಗಿನ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ ಇದರ ಪರಿಹಾರಕ್ಕೆ ಅಗತ್ಯ ಕ್ರಮ ಸೇರಿದಂತೆ ಇತರ ಒಂಭತ್ತು ಬೇಡಿಕೆಗಳನ್ನು ಕಟೀಲ್ ಅವರಿಗೆ ಸಲ್ಲಿಸಲಾಯಿತು.

ಕಾಫಿ ಮಂಡಳಿಯನ್ನು ರಬ್ಬರ್ ಹಾಗೂ ಟೀ ಮಂಡಳಿಯೊಂದಿಗೆ ವಿಲೀನಗೊಳಿಸಬಾರದು. ವಿಯೆಟ್ನಾಂ ದೇಶದಿಂದ ಕಳಪೆ ಕರಿಮೆಣಸು ಅಮದಾಗುತ್ತಿದ್ದು, ಇದನ್ನು ನಿರ್ಭಂಧಿಸಬೇಕು, ಈ ನಿಟ್ಟಿನಲ್ಲಿ ಏಕ ಬಂದರು ಆಮದು ವ್ಯವಸ್ಥೆಗೆ ಮುಂದಾಗಬೇಕು. ಶ್ರೀಲಂಕಾದ ಮೂಲಕ ಹಾಗೂ ಇತರ ಭಾಗದಿಂದ ತೆರಿಗೆ ವಂಚಿಸಿ ದೇಶಕ್ಕೆ ಪ್ರವೇಶಿಸುತ್ತಿರುವ ಹೊರದೇಶದ ಕರಿಮೆಣಸನ್ನು ನಿಯಂತ್ರಿಸುವದು ಸೇರಿದಂತೆ ಸಂಕಷ್ಟದಲ್ಲಿರುವ ಬೆಳೆಗಾರರ ರಕ್ಷಣೆಗೆ ತ್ವರಿತವಾಗಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಯಿತು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸದರು ಫೀ.ಮಾ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಬೇಕೆನ್ನುವದು ನನ್ನ ಅಭಿಲಾಷೆಯಾಗಿದೆ. ಕಾಫಿ ಮತ್ತು ಕರಿಮೆಣಸು ಬಗ್ಗೆ ಈಗಾಗಲೇ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಲು ರಾಜ್ಯದ ಬಿ.ಜೆ.ಪಿ. ಸಂಸದರ ನಿಯೋಗ ಮುಂದಾಗಿದೆ. ಅವಶ್ಯವಾದರೆ ಕೊಡಗು ಜಿಲ್ಲೆಯಿಂದಲೂ ಬೆಳೆಗಾರರ ನಿಯೋಗಕ್ಕೆ ಈ ಸಂದರ್ಭ ಅವಕಾಶ ಕಲ್ಪಿಸಲಾಗುವದು. ತಾವು ಬೆಳೆಗಾರರ ಪರವಾಗಿದ್ದು, ಬೆಳೆಗಾರರ ಸಂಕಷ್ಟವನ್ನು ಕೇಂದ್ರಕ್ಕೆ ಮನವಿ ಮಾಡಿ ಬೆಳೆಗಾರರ ಸಮಸ್ಯೆ ಶೀಘ್ರ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ತೆರಳಿದ ನಿಯೋಗದಲ್ಲಿ ನೆಲ್ಲಮಕ್ಕಡ ಮಾದಯ್ಯ, ಕೊಟ್ರಂಗಡ ಬಿಪಿನ್, ಗುಡಿಯಂಗಡ ಲಿಖಿನ್ ಬೋಪಣ್ಣ, ತೇಲಪಂಡ ಪ್ರವೀಣ್ ಅಯ್ಯಣ್ಣ, ಅಪ್ಪಾರಂಡ ವೇಣು ಪೊನ್ನಪ್ಪ, ಬಿ.ಜೆ.ಪಿ. ಯುವ ಮುಖಂಡ ತೇಲಪಂಡ ಶಿವಕುಮಾರ್ ನಾಣಯ್ಯ ಇದ್ದರು.