ಶ್ರೀಮಂಗಲ, ನ. 19: ಸ್ವಾತಂತ್ರ್ಯ ಬಂದ ಸಂದರ್ಭ ಭಾರತವು ಆಹಾರ ಕೊರತೆ, ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ, ವಿದ್ಯುತ್ ಕಾಣದ ಲಕ್ಷಾಂತರ ಗ್ರಾಮಗಳು ಸೇರಿದಂತೆ ಕುಡಿಯುವ ನೀರಿಗೂ ಸಹ ಸಮಸ್ಯೆ ಎದುರಿಸುತ್ತಾ ಸಂಕಷ್ಟದಲ್ಲಿತ್ತು. ಸುಮಾರು 55 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಇವೆಲ್ಲವನ್ನೂ ನಿವಾರಿಸಿ ಆಡಳಿತದಲ್ಲಿನ ದೂರ ದೃಷ್ಟಿಯಿಂದ ಬಹುತೇಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಹಿಂದುಳಿದ ವರ್ಗದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಅಭಿಪ್ರಾಯಪಟ್ಟರು.

ಹುದಿಕೇರಿ ಕೊಡವ ಸಮಾಜದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ ಹಲವು ದಶಕದ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಏನು ಸಾಧನೆ ಮಾಡಿದೆ ಎಂಬ ಬಿಜೆಪಿಯ ಪ್ರಶ್ನೆಗೆ ಸವಾಲು ಹಾಕಿದ ಅವರು ಕಾಂಗ್ರೆಸ್ ಪಕ್ಷದಿಂದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದಲ್ಲಿ ಪಕ್ಷದ ಸಾಧನೆ ಬಗ್ಗೆ ಎಲ್ಲಾ ಪಕ್ಷದ ಜನರ ಮನೆಗೆ ತೆರಳಿ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದ ಕಾರಣ ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ನಡೆದರೂ ಪ್ರಚಾರ ಬಿಜೆಪಿ ಶಾಸಕರು ಪಡೆಯುತ್ತಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮದೇ ಪಕ್ಷದ ಶಾಸಕರನ್ನು ಗೆಲ್ಲಿಸಿ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ರಾಜ್ಯದಲ್ಲಿ ಜನಪರ ಆಡಳಿತವನ್ನು ಕಾಂಗ್ರೆಸ್ ಮಾಡುತ್ತಿದ್ದು, ಇತರ ಪಕ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್‍ಗೆ ಪ್ರಚಾರದ ಕೊರತೆ ಉಂಟಾಗಿ ಜನರಿಗೆ ವಿಚಾರ ತಲುಪುತ್ತಿಲ್ಲ. ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಬೂತ್‍ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಿ ಮುಂದಿನ 6 ತಿಂಗಳಲ್ಲಿ ಎದುರಾಗುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಣಿಯಾಗ ಬೇಕೆಂದು ಕರೆ ನೀಡಿದರು. ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಪೊನ್ನಂಪೇಟೆ ಬ್ಲಾಕ್ ಒಬಿಸಿ ಅಧ್ಯಕ್ಷ ಸಾಜಿ ಅಚ್ಚುತ್ತನ್, ಅಲ್ಪಸಂಖ್ಯಾತ ಘಟದ ಉಪಾಧ್ಯಕ್ಷ ಎ.ಎ. ಅಹಮದ್, ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ರೇಖಾ ಪೊನ್ನಪ್ಪ, ಉಪಾಧ್ಯಕ್ಷೆ ಸುನಿತಾ, ಹುದಿಕೇರಿ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೇರಿ, ಕಾರ್ಯದರ್ಶಿ ಸಾದಲಿ, ಹುದಿಕೇರಿ ಯುವ ವಲಯ ಘಟಕದ ಅಧ್ಯಕ್ಷ ಸಿ.ಆರ್. ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.