ಸೋಮವಾರಪೇಟೆ, ನ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವುಗಳ ಆಶ್ರಯದಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿಯ ಕಾಟಿಕೊಪ್ಲು ಗ್ರಾಮದಲ್ಲಿ ಹೈನುಗಾರಿಕೆ ಕುರಿತ ವಿಚಾರಗೋಷ್ಠಿ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಅಜಿತ್‍ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆಯ ಬದಲಾಗಿ ಸಾವಯವ ಗೊಬ್ಬರ ಬಳಸುವತ್ತ ಗಮನಹರಿಸಬೇಕು. ರೈತರು ಸರ್ಕಾರದ ಗುಲಾಮರಾಗದೇ ತಮ್ಮ ಹೊಲದ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದರು.

ರೈತರು ಸೂಕ್ತ ಮಾರುಕಟ್ಟೆ ವ್ಯವಸ್ಥೆ, ದರ ಏರಿಳಿತ, ಹವಾಮಾನದ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿಕೊಳ್ಳಬೇಕು. ಹಿಡುವಳಿ ಯೋಜನೆಗಳನ್ನು ಅಳವಡಿಸಿಕೊಳ್ಳ ಬೇಕು ಎಂದು ಪ್ರಕಾಶ್ ತಿಳಿಸಿದರು.

ಪಶು ವೈದ್ಯಕೀಯ ಇಲಾಖೆಯ ಡಾ. ನಾಗರಾಜ್ ಮಾತನಾಡಿ, ಹೈನುಗಾರಿಕೆ ಲಾಭದಾಯಕ ಕೃಷಿಯಾಗಿದ್ದು, ಜಾನುವಾರು ಸಾವನ್ನಪ್ಪಿದರೆ ಸರ್ಕಾರದಿಂದ ಪರಿಹಾರ ಧನ ನೀಡಲಾಗುತ್ತದೆ. ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಬೇಕು. ವಿವಿಧ ರೀತಿಯ ರೋಗಗಳಿಂದ ಕಾಪಾಡಿ ಕೊಳ್ಳಬೇಕು. ಅವುಗಳಿಗೆ ಒದಗಿಸುವ ಮೇವಿನ ಬಗ್ಗೆಯೂ ರೈತರು ಕಾಳಜಿ ವಹಿಸಬೇಕು ಎಂದರು. ಪಶು ವೈದ್ಯಾಧಿಕಾರಿ ಡಾ. ಶೈಲಾ ಮಾತನಾಡಿ, ಯೂರಿಯಾ ಬದಲು ಹಸಿರೆಲೆ ಗೊಬ್ಬರಗಳನ್ನು ಬಳಸುವದ ರಿಂದ ನೈಟ್ರೋಜನ್ ಹೆಚ್ಚಾಗಿ ಮಣ್ಣಿನ ಫಲವತ್ತತೆ ಅಧಿಕಗೊಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ವಿನೋದ್‍ಕುಮಾರ್, ಲಕ್ಷ್ಮಮ್ಮ, ವಿನಾಯಕ ಯುವಕ ಸಂಘದ ಅಧ್ಯಕ್ಷ ಕುಮಾರ್, ಪ್ರಗತಿಪರ ಕೃಷಿಕ ಪುಟ್ಟಸ್ವಾಮಿ, ಮುಖ್ಯ ಶಿಕ್ಷಕ ಬಸವರಾಜು, ಒಕ್ಕೂಟದ ಅಧ್ಯಕ್ಷ ಶಶಿಕುಮಾರ್, ವಲಯ ಮೇಲ್ವಿಚಾರಕ ಕೆ. ರಮೇಶ್ ಸೇವಾ ಪ್ರತಿನಿಧಿ ಶೈಲಾ, ಭವ್ಯ, ತಾರಾಲಕ್ಷ್ಮೀ, ಚೈತ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.