ಸೋಮವಾರಪೇಟೆ, ನ. 19: ಒಕ್ಕಲಿಗ ಗೌಡ ಜನಾಂಗದವರು ಶೈಕ್ಷಣಿಕ, ಕ್ರೀಡಾ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಮಾಜಿ ಅರಣ್ಯ ಸಚಿವ ಬಿ.ಎ. ಜೀವಿಜಯ ಹೇಳಿದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗ ಗೌಡ ಸಂಘದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಯಡವನಾಡು ಸ.ಪ್ರಾ.ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡಾಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಮ್ಮ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ದೊಡ್ಡ ಸಾಧನೆ ಮಾಡಬೇಕಾಗಿದೆ. ನಮ್ಮ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲೇರುತ್ತಿದೆ. ಜನಾಂಗದ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ. ನಮ್ಮ ವಿದ್ಯಾರ್ಥಿಗಳು ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿ, ಸಮಾಜಕ್ಕೆ ಗೌರವ ತರಬೇಕು ಎಂದು ಆಶಿಸಿದರು.

ಐಗೂರು ಗ್ರಾಪಂ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎಸ್. ಚಂಗಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಜಿಪಂ ಸದಸ್ಯರಾದ ಕೆ.ಪಿ. ಚಂದ್ರಕಲಾ, ಪೂರ್ಣಿಮಾ ಗೋಪಾಲ್, ಗೌಡಳ್ಳಿ ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ತಾಪಂ ಸದಸ್ಯೆ ಸಬಿತಾ ಚನ್ನಕೇಶವ, ಸಂಘದ ಪದಾಧಿಕಾರಿಗಳಾದ ವಿ.ಕೆ. ಶಂಭುಗೌಡ, ಎಂ.ಎಲ್. ನಾಗರಾಜ್ ಇದ್ದರು.

ಬೆಳಿಗ್ಗೆ ಕ್ರೀಡಾಕೂಟವನ್ನು ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಎಲ್.ರಾಜು ಉದ್ಘಾಟಿಸಿದರು. ಮಹಿಳೆಯರು, ಪುರುಷರು, ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಮಹಿಳೆಯರು ಮತ್ತು ಪುರುಷರ ಹಗ್ಗಾಜಗ್ಗಾಟ ಸ್ಪರ್ಧೆ ರೋಮಾಂಚನಕಾರಿಯಾಗಿತ್ತು. ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಮಹಿಳಾ ತಂಡದ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.