ಶ್ರೀಮಂಗಲ, ನ. 19: ಬಿ.ಜೆ.ಪಿ. ಪಕ್ಷದ ಅಧಿಕಾರದಲ್ಲಿರುವ ಸಹಕಾರ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ರೈತÀರಿಗೆ ದ್ರೋಹ ಎಸಗುವಂತಹ ಕೃತ್ಯಗಳು ನಡೆದಿವೆ. ಇದಕ್ಕೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಕ್ರಮವಾಗಿ ವಿಯೆಟ್ನಾಂ ಕರಿಮೆಣಸು ಆಮದು ಮಾಡಿಕೊಂಡು ರೈತರಿಗೆ ವಂಚನೆ ಮಾಡಿರುವದು ಉದಾಹರಣೆ. ಇದೀಗ ವೀರಾಜಪೇಟೆ ಸಹಕಾರ ಮಾರಾಟ ಮಾಹಾ ಮಂಡಲ ನಿಯಮಿತದ ಆಡಳಿತಕ್ಕೆ ಒಳಪಡುವ ಪೊನ್ನಂಪೇಟೆ ಶಾಖೆಯಲ್ಲಿ ಅಕ್ರಮವಾಗಿ ರಸಗೊಬ್ಬರ ಸಾಗಾಟ ಮಾಡಿರುವದು ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ.
ಕುಟ್ಟದಲ್ಲಿ ಕಾಂಗ್ರೆಸ್ ಪಕ್ಷದಿಂದ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಿಮೆಣಸು ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಿತರಾಗಿ ಗೋಣಿಕೊಪ್ಪ ಎ.ಪಿ.ಎಂ.ಸಿ ಆಡಳಿತ ಮಂಡಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಅಧಿಕಾರದ ಆಸೆಯಿಂದ ಅಧಿಕಾರದಲ್ಲಿ ಮುಂದುವರೆದಿರುವದು ಖಂಡನೀಯ ಎಂದು ಕಿಡಿಕಾರಿದರು.
ಬಿ.ಜೆ.ಪಿ. ಆಡಳಿತದಲ್ಲಿರುವ ವೀರಾಜಪೇಟೆ ಸಹಕಾರ ಮಾರಾಟ ಮಹಾ ಮಂಡಳಿಯ ಅಧೀನದ ಪೊನ್ನಂಪೇಟೆ ಶಾಖೆಯಿಂದ ಇನ್ನೊಂದು ಹಗರಣ ಬೆಳಕಿಗೆ ಬಂದಿದ್ದು, ರಾಜ್ಯದ ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರವನ್ನು ಕೇರಳಕ್ಕೆ ಸಾಗಿಸಿ ಮಾರಾಟ ಮಾಡುವ ಪ್ರಯತ್ನದ ಹಿಂದೆ ಆಡಳಿತ ಮಂಡಳಿಯ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಸಂಸ್ಥೆಯ ಆಡಳಿತ ಮಂಡಳಿ ಕೂಡಲೇ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಪಕ್ಷ ಜಿಲ್ಲಾ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ ಕೇರಳ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇದೆ. ಈಗಾಗಲೇ ವೀರಾಜಪೇಟೆ ಸಹಕಾರ ಮಾರಾಟ ಮಹಾ ಮಂಡಳಿ ಆಡಳಿತ ವ್ಯಾಪ್ತಿಯ ಸಂಸ್ಥೆಯಿಂದ 14 ಲೋಡ್ ಅಂದರೆ 2800 ಚೀಲ ಯೂರಿಯಾ ಗೊಬ್ಬರವನ್ನು ಬ್ಯಾಂಕ್ಗೆ ರೂ 290 ಗಳಿಗೆ ಖರೀದಿ ಮಾಡಿ ಕೇರಳದಲ್ಲಿ ರೂ 814ಕ್ಕೆ ಮಾರಾಟ ಮಾಡಿರುವದು ಗೋಚರಿಸಿದೆ. ಈ ಮೂಲಕ ಕರಿಮೆಣಸು ಅಕ್ರಮದಲ್ಲಿ ಶಾಮೀಲಾಗಿ ರುವ ಗೋಣಿಕೊಪ್ಪ ಎ.ಪಿ.ಎಂ.ಸಿ. ಯ ಪ್ರಕರಣದ ನಂತರ ಇದೀಗ ಬಿ.ಜೆ.ಪಿ. ಅಧಿಕಾರದಲ್ಲಿರುವ ವೀರಾಜಪೇಟೆಯ ಸಹಕಾರ ಮಾರಾಟ ಮಂಡಲದ ಆಡಳಿತ ಮಂಡಳಿಯೂ ಸಹ ರಸಗೊಬ್ಬರದಲ್ಲೂ ಅಕ್ರಮವೆಸಗಿ ಜಿಲ್ಲೆಯ ರೈತರನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲೆಯ ಬಿ.ಜೆ.ಪಿ. ಶಾಸಕ ಕೆ.ಜಿ. ಬೋಪಯ್ಯ, ಹಾಗೂ ಅಪ್ಪಚ್ಚು ರಂಜನ್ ಅವರು ಅಕ್ರಮ ಕರಿಮೆಣಸು ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಇದರಲ್ಲಿ ಶಾಮೀಲಾಗಿರುವ ಗೋಣಿಕೊಪ್ಪ ಎ.ಪಿ.ಎಂ.ಸಿ. ಹಾಗೂ ರಸಗೊಬ್ಬರ ಅಕ್ರಮ ಮಾರಾಟದಲ್ಲಿ ಶಾಮೀಲಾಗಿರುವ ವೀರಾಜಪೇಟೆ ಸಹಕಾರ ಮಾರಾಟ ಮಹಾ ಮಂಡಲದ ಆಡಳಿತ ಮಂಡಳಿಯ ರಾಜೀನಾಮೆ ಕೇಳದೆ ಇರುವದು ಸಂಶಯ ಮೂಡಿಸುತ್ತಿದೆ ಎಂದು ಅಭಿಪ್ರ್ರಾಯ ಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಮುಕ್ಕಾಟೀರ ಸಂದೀಪ್, ನಾಲ್ಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಚಿಮಾಡ ಮನು ಮಾಚಯ್ಯ, ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ. ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ, ಮುಖಂಡರಾದ ಪೆಮ್ಮಣಮಾಡ ಮನು ತಮ್ಮಯ್ಯ, ಶಂಕರ್, ಬೋಸು ಮತ್ತಿತರಿದ್ದರು.