ವೀರಾಜಪೇಟೆ, ನ. 19: ಕಳೆದ ಎರಡು ದಿನಗಳ ಹಿಂದೆ ಮಾನವ ಹಕ್ಕು ಜಾಗೃತಿ ಸಮಿತಿಯ ಮಹಿಳಾ ಘಟಕದ ಸಭೆಯಲ್ಲಿ ಅಧ್ಯಕ್ಷೆ ಪಡಿಕ್ಕಲ್ ಕುಸುಮಾವತಿ ಅವರ ಮೇಲೆ ನಡೆದ ಹಲ್ಲೆಯನ್ನು ಸಮಿತಿ ಖಂಡಿಸಿದೆ. ಆರೋಪಿ ರಫೀಕ್ ಎಂಬವನ ಮೇಲೆ ಮಹಿಳೆಯ ಮೇಲೆ ಹಲ್ಲೆ ಜೊತೆಗೆ ಗೂಂಡಾ ಕಾಯಿದೆ ಮೇರೆ ತಕ್ಷಣ ಬಂಧಿಸಬೇಕು ಎಂದು ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಆಗ್ರಹಿಸಿದ್ದಾರೆ.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಪುರಭವನದಲ್ಲಿ ನಡೆದ ಸಮಿತಿ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯನಾಗಿದ್ದ ರಫೀಕ್, ಶಿಸ್ತನ್ನು ಪಾಲಿಸದೆ ಹಿಂದಿನ ವೈಷಮ್ಯದಿಂದ ಸಭೆಯ ಮುಂದೆಯೇ ಅಮಾಯಾಕ ಮಹಿಳೆಯ ಕೆನ್ನೆಗೆ ಥಳಿಸಿ ಗಾಯಗೊಳಿಸಿರುವದು ಕಾನೂನು ಬಾಹಿರವಾಗಿದೆ. ಈ ದೂರಿನ ಮೇರೆ ರಾಜ್ಯ ಸಮಿತಿ ಅಧ್ಯಕ್ಷರು ಸಮೇತನ ಹಳ್ಳಿ ಲಕ್ಷ್ಮಣ್ ಸಿಂಗ್ ಅವರಿಗೆ ರಫೀಕ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ ಜೊತೆಗೆ ಮಹಿಳಾ ಘಟಕವನ್ನು ತಕ್ಷಣ ವಿಸರ್ಜಿಸಲು ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಜಾಗೃತಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಆರ್.ಹರ್ಷ, ಘಟಕದ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಇಟ್ಟೀರ ಸಂಪತ್, ತಾಲೂಕು ಸಮಿತಿ ಕಾರ್ಯದರ್ಶಿ ಅಮ್ಮಂಡ ವಿವೇಕ್, ತಾಲೂಕು ಸಂಚಾಲಕ ವಿ.ಪಿ. ಫಾಜಿಲ್ ಜಿಲ್ಲಾ ಸಮಿತಿಯ ಗೌರವ ಅಧ್ಯಕ್ಷ ವಿ.ಸಿ. ಬೋರಯ್ಯ, ಮತ್ತಿತರರು ಉಪಸ್ಥಿತರಿದ್ದರು.