ಗೋಣಿಕೊಪ್ಪ ವರದಿ, ನ. 20: ಕಾಫಿ ತೋಟದಲ್ಲಿ ಮರ ಕಡಿದು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಧಾಳಿ ನಡೆಸಿರುವ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಮರ, ವಾಹನ ಸೇರಿದಂತೆ ಸುಮಾರು 50 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದೆ.
ಧಾಳಿ ಸಂದರ್ಭ ಹಲವರು ತಪ್ಪಿಕೊಂಡಿದ್ದು, ಲಾರಿ ಚಾಲಕ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಸಿದ್ದಾಪುರದ ಯಾಯಾ ಎಂಬಾತ ತಲೆ ಮರೆಸಿಕೊಂಡಿದ್ದಾನೆÉ. ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಪಾಲಿಬೆಟ್ಟ ಸಮೀಪದ ಮೇಕೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆದಿದೆ. ಚಾಲಕ ಚಾಮರಾಜನಗರದ ಮಹೇಶ್, ಕ್ಲೀನರ್ ಕೊಳ್ಳೆಗಾಲದ ಮುತ್ತುರಾಜ್, ಸಿದ್ದಾಪುರದ ಜೂನದ್, ತ್ಯಾಗತ್ತೂರುವಿನ ಸಲೀಂ ಬಂಧಿತ ಆರೋಪಿಗಳು.
ವಿವರ: ಭಾನುವಾರ ತಡ ರಾತ್ರಿಯಿಂದ ಮುಂಜಾನೆವರೆಗೂ ಕಾರ್ಯಾಚರಣೆ ನಡೆಸಿರುವ ತಂಡ ಅಲ್ಲಿನ ತೋಟದಲ್ಲಿ ಕಡಿದು ಇಟ್ಟಿದ್ದ ಲಕ್ಷಾಂತರ ಮೌಲ್ಯದ ಮರದ ನಾಟಾವನ್ನು ವಶಪಡಿಸಿಕೊಂಡಿತು.
ಆರೋಪಿಗಳು ನಂದಿ ಮತ್ತು ತಡ್ಚಿಲ್ ಮರದ ನಾಟಗಳನ್ನು ಸಾಗಣೆಗೆ ಮುಂದಾಗಿದ್ದರು. ಈ ಸಂದರ್ಭ ಲಾರಿಗೆ ಲೋಡ್ ಮಾಡಿದ್ದ 28 ನಾಟಗಳು, 2 ಲಾರಿ, 1 ಕ್ರೇನ್ ಹಾಗೂ 1 ಕಾರ್‍ನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಸುಮಾರು 9 ಮೀ. ಅಳತೆಯ ಮರ ಸ್ಥಳದಲ್ಲಿಯೇ ದೊರೆತಿದೆ.
ಹಲವು ತಿಂಗಳಿನಿಂದ ಇಲ್ಲಿ ಮರ ಕಡಿದು ಸಂಗ್ರಹಿಸಿಡಲಾಗಿತ್ತು. ಮರ ಸಾಗಿಸುವ ಸುಳಿವು ಅರಿತು ಇಲಾಖೆ ತಂಡ ಕಾರ್ಯಾಚರಣೆ ನಡೆಸಿದೆ. ಸಂಜೆ 5 ಗಂಟೆಯಿಂದ ಮರವನ್ನು ಲಾರಿಗೆ ಲೋಡ್ ಮಾಡುತ್ತಿದ್ದ ರಾದರೂ ರಾತ್ರಿ ವೇಳೆ ಧಾಳಿ ನಡೆದಿದೆ. ಅಕ್ರಮ ಮರಗಳನ್ನು ಲಾರಿಯ ಕೆಳಗೆ ಹಾಕಿ ಮೇಲೆ ಸಿಲ್ವರ್ ಮರದ ಸೌಧೆಗಳನ್ನು ಜೋಡಿಸಿ ಸಾಗಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿಯಂತೆ ಧಾಳಿ ನಡೆದಿದೆ. 4 ಲಕ್ಷ ಮೌಲ್ಯದ ಮರದ ನಾಟ ಹಾಗೂ ಸುಮಾರು 46 ಲಕ್ಷ ಮೌಲ್ಯದ ವಾಹನ, ಕ್ರೇನ್ ಅನ್ನು ವಶಕ್ಕೆ ಪಡೆಯಲಾಗಿದೆ.
ಧಾಳಿ ಸಂದರ್ಭ ವೀರಾಜಪೇಟೆ ಡಿಸಿಎಫ್ ಮರಿಯಾ ಕ್ರೈಸ್ಥರಾಜ್, ಎಸಿಎಫ್ ಶ್ರೀಪತಿ, ತಿತಿಮತಿ ವಲಯ ಆರ್‍ಎಫ್‍ಒ ಅಶೋಕ್, ಸಿಬ್ಬಂದಿ ಶ್ರೀನಿವಾಸ್, ಗಣಪತಿ, ಸಂಜು ಸಂತೋಶ್, ಹಾಗೂ ಸಿದ್ದ ಪಾಲ್ಗೊಂಡಿದ್ದರು.