ಮಡಿಕೇರಿ, ನ. 20: ಕಳೆದ ಒಂದು ವರ್ಷ ದಿಂದ ವಾಹನ ಚಾಲಕರಿಗೆ ದುಸ್ವಪ್ನವಾಗಿ ಕಾಡಿದ್ದ ಮಡಿಕೇರಿ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ತಾ. 21ರಿಂದ ಚಾಲನೆ ದೊರೆಯಲಿದೆ ಎಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.
ನಗರದ 23 ವಾರ್ಡ್‍ಗಳ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ರೂ. 9.80 ಲಕ್ಷ ವೆಚ್ಚದಲ್ಲಿ ನಡೆಯಲಿದೆ. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರಾದ ಫಯಾಜ್ ಹಾಗೂ ಸುಬ್ರಮಣಿ ತಲಾ 4.90 ಲಕ್ಷ ರೂ.ಗಳಲ್ಲಿ ರಸ್ತೆ ದುರಸ್ತಿ ಮಾಡಲಿದ್ದಾರೆ. ಮಳೆಗಾಲ ಕಳೆದರೂ ಒಂದು ವರ್ಷದಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ನಗರಸಭೆ ಕ್ರಮ ಕೈಗೊಂಡಿರಲಿಲ್ಲ. ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ತೀವ್ರ ಟೀಕೆಗೆ ಗುರಿಯಾದರೂ ರಸ್ತೆ ದುರಸ್ತಿಗೆ ಆಡಳಿತ ಮಂಡಳಿ ಮನಸ್ಸು ಮಾaಡಿರಲಿಲ್ಲ. ದಸರಾ ಸಂದರ್ಭದಲ್ಲಿ ಹಾಕಿದ್ದ ತೇಪೆ ಮತ್ತೆ ಸುರಿದ ಅಕಾಲಿಕ ಮಳೆಗೆ ಕೊಚ್ಚಿ ಹೋಗಿತ್ತು. ನಗರದಲ್ಲಿ ವಾಹನಗಳು ಮಾತ್ರವಲ್ಲದೆ ಪಾದಾಚಾರಿಗಳು ಕೂಡ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಯು.ಜಿ.ಡಿ. ಕಾಮಗಾರಿಯ ಅಡ್ಡಿ, ಆತಂಕ ಗಳಿಂದಾಗಿ ನಗರಸಭೆ ಕೂಡ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಸಾರ್ವಜನಿಕರಿಂದ ನಿರಂತರ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಡವಾಗಿಯಾದರೂ ಎಚ್ಚೆತ್ತುಕೊಂಡ ನಗರಸಭೆ ಗುಂಡಿ ಮುಚ್ಚುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಯು.ಜಿ.ಡಿ. ಕಾಮಗಾರಿಯಿಂದ ಉಂಟಾಗಿರುವ ಗುಂಡಿಗಳನ್ನು ಯುಜಿಡಿ ಗುತ್ತಿಗೆದಾರರೇ ಮುಚ್ಚಲಿದ್ದಾರೆ ಎಂದು ತಿಳಿಸಿರುವ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಳಿದ ಕಾಮಗಾರಿಯನ್ನು ಇಬ್ಬರು ಗುತ್ತಿಗೆದಾರರು ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ನಗರದ 23 ವಾರ್ಡ್‍ಗಳ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.