ಮಡಿಕೇರಿ, ನ.20: ಸರ್ಕಾರದ ಮಹತ್ವಾಕಾಂಕ್ಷಿ ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಕಾರ್ಯಕ್ಕೆ ರೈತರು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕೋರಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ಸಮೀಕ್ಷೆ ಪ್ರಗತಿ ಸಂಬಂಧಿಸಿದಂತೆ ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯು ಶೇ.52 ರಷ್ಟು ಪ್ರಗತಿಯಾಗಿದ್ದು ಶೇ.100 ರಷ್ಟು ಪ್ರಗತಿ ಸಾಧಿಸಬೇಕಿದೆ. ಬೆಳೆ ಸಮೀಕ್ಷೆಯಲ್ಲಿ ರೈತರ ಸಹಕಾರ ಅತ್ಯಗತ್ಯವಾಗಿದ್ದು, ರೈತರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮೊಬೈಲ್ ಆ್ಯಪ್ ಆಧಾರಿತ ಬೆಳೆ ಸಮೀಕ್ಷೆ ಮಾಡಬೇಕಿದ್ದು, ಸ್ಮಾರ್ಟ್ ಪೋನ್ ಇರುವವರು, ಅಂತರ್ಜಾಲ ಬಳಸಿ ಬೆಳೆ ಸಮೀಕ್ಷೆ ಕೈಗೊಳ್ಳಬಹುದಾಗಿದೆ. ಪ್ರತಿ ಗ್ರಾಮವಾರು, ಸರ್ವೆ ನಂಬರ್‍ವಾರು ಬೆಳೆಗಳ ವಿವರಗಳನ್ನು ದಾಖಲಿಸಿ ತಂತ್ರಾಂಶದಲ್ಲಿ ಫೋಟೋಗಳನ್ನು ಅಪ್‍ಲೋಡ್ ಮಾಡಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯ 529 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದ್ದು, ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳನ್ನು ಬೆಳೆ ಸಮೀಕ್ಷೆಗೆ ನಿಯೋಜಿಸಲಾಗಿದ್ದು, ರೈತರ ಸಹಕಾರ ಪಡೆದು ಬೆಳೆ ಸಮೀಕ್ಷೆ ಪ್ರಗತಿಗೆ ಮುಂದಾಗಬೇಕಿದೆ ಎಂದು ಅವರು ನಿರ್ದೇಶನ ನೀಡಿದರು.

ಜಮೀನು ಕ್ಷೇತ್ರವನ್ನು ವಿವಿಧ ಬೆಳೆ ಸ್ವರೂಪಗಳಿಗೆ ಸಮೀಕರಿಸುವದು, ವಿವಿಧ ಬೆಳೆಗಳಿಗೆ ಸರಿಯಾದ ಮೊತ್ತದ ಸಹಾಯಧನದ ಅಂದಾಜು ಪ್ರಕ್ರಿಯೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಫಸಲು ನಷ್ಟದ ನೈಜ ಅಂದಾಜು ಮತ್ತು ರೈತರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ, ಪಹಣಿ ಪತ್ರಿಕೆ ಮತ್ತು ವಿಮೆ ದಾಖಲೆಗಳಲ್ಲಿ ನಿಖರ ಮಾಹಿತಿ ಕ್ರೋಢೀಕರಿಸಬೇಕಿದೆ ಎಂದು ಹೇಳಿದರು.

ರೈತರ ಮಾಲೀಕತ್ವದ ವಿವರ, ಭೂಮಿಯ ವಿಧ, ಬೆಳೆ ಹೆಸರು, ನೀರಾವರಿ ಮೂಲ, ಬೆಳೆಯ ವಿಸ್ತೀರ್ಣ, ಬೆಳೆ, ಜಮೀನಿನ ಛಾಯಾಚಿತ್ರ ವಿವರಗಳನ್ನು ದಾಖಲಿಸಿ ಪ್ರತೀ ಸರ್ವೆ ನಂಬರ್ ಮಾಹಿತಿ ಸಂಗ್ರಹಿಸಬೇಕಿದೆ. ಬೆಳೆ ವಿವರ ಜೊತೆಗೆ ಮಾಲೀಕರ ವಿವರಗಳನ್ನು ದಾಖಲಿಸಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ರೈತರು ಬೆಳೆ ಸಮೀಕ್ಷೆ ಬಗ್ಗೆ ಅನುಕೂಲವಾಗುವಂತೆ ಮೊಬೈಲ್ ಆ್ಯಪ್ ಸಿದ್ದಪಡಿಸಿದ್ದು ಈ ಆ್ಯಪ್ ಮೂಲಕ ರೈತರು ಸ್ವತಃ ತಾವೇ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ರಾಮದಾಸ್ ಹಾಗೂ ತಾಂತ್ರಿಕ ಅಧಿಕಾರಿಗಳು ಬೆಳೆ ಸಮೀಕ್ಷೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.