ಮಡಿಕೇರಿ, ನ. 21: ಮಡಿಕೇರಿ ಎಪಿಎಂಸಿ ಆವರಣದಲ್ಲಿ ಮುಂದಿನ ಜನವರಿಯಿಂದ ಗ್ರಾಮೀಣ ರೈತರ ಅನುಕೂಲಕ್ಕಾಗಿ ವಾರದಲ್ಲಿ ಒಂದು ದಿವಸ ಸಂತೆ ನಡೆಸಲಾಗುವದು ಎಂದು ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಆಡಳಿತ ಮಂಡಳಿ ಈ ಸಂಬಂಧ ರೈತರೊಂದಿಗೆ ಮಾತುಕತೆ ನಡೆಸಿದ್ದು, ಉತ್ತಮ ಸ್ಪಂದನ ಲಭಿಸಿದೆ ಎಂದು ತಿಳಿಸಿದರು.
ರೈತರು ತಮ್ಮ ಬೆಳೆಗಳನ್ನು ಸಗಟು ಮಾರಾಟ ಗೊಳಿಸಲು ಬೇಕಾಗುವ ಶೌಚಾಲಯ, ನೀರು, ಗೋದಾಮು ಸಹಿತ ಎಲ್ಲ ಮೂಲಭೂತ ಸೌಕರ್ಯವನ್ನು ಸಮಿತಿ ಕಲ್ಪಿಸಲಿದ್ದು, ಗ್ರಾಮೀಣ ರೈತರು ತಾವು ಬೆಳೆದಂತಹ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಸರಕಾರ ಸ್ಪಂದಿಸಿಲ್ಲ: ಮಡಿಕೇರಿ ಎಪಿಎಂಸಿ ಅನಾಥಗೊಂಡಿದೆ ಎಂಬ ‘ಶಕ್ತಿ’ ವರದಿಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಹಾಗೂ ಪ್ರಮುಖರು, ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕರ ಸಹಿತ ಪ್ರಮುಖ ಹುದ್ದೆಗಳಿಲ್ಲದೆ, ಮಂಡ್ಯದ ಅಧಿಕಾರಿ ಪ್ರಬಾರ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿ ಸರಕಾರಕ್ಕೆ ಅನೇಕ ಬಾರಿ ಪತ್ರ ಬರೆದರೂ ಸಿಬ್ಬಂದಿ ಕೊರತೆ ತುಂಬಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಆಡಳಿತ ಸಮಿತಿಯು ಗುತ್ತಿಗೆ ಯಲ್ಲಿ ಮೂವರು ಭದ್ರತಾ ಸಿಬ್ಬಂದಿ ನಿಯೋಜಿಸಿಕೊಂಡಿದ್ದು, ರೈತರ ಸಮಸ್ಯೆ ಹಾಗೂ ಮಾರುಕಟ್ಟೆ ಸಮಿತಿಯ ಕೆಲಸಗಳನ್ನು ಸುಗಮವಾಗಿ ನಿರ್ವಹಿಸಲು ಇನ್ನಾದರೂ ಸರಕಾರ ಖಾಯಂ ಕಾರ್ಯದರ್ಶಿಗಳೊಂದಿಗೆ ಇತರ ಹುದ್ದೆಗಳನ್ನು ತುಂಬ ಬೇಕೆಂದು ಆಗ್ರಹಿಸಿದರು.
ಅತಿಕ್ರಮಣ ವಿರುದ್ಧ ಕ್ರಮ: ಎಪಿಎಂಸಿ ಆವರಣದೊಳಗೆ ನಗರ ಸಭೆಯಿಂದ ನಿಯಮ ಬಾಹಿರವಾಗಿ ರಸ್ತೆಯನ್ನು ನಿರ್ಮಿಸಿರುವ ಬಗ್ಗೆ ಆಡಳಿತ ಮಂಡಳಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದ ಪ್ರಮುಖರು, ಕಾನೂನಿನ ಅಡಿಯಲ್ಲಿ ಮುಂದೆ ಅಗತ್ಯ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದರು. ಈಗಾಗಲೇ ಎಪಿಎಂಸಿ ಆವರಣದ ಸರಹದ್ದು ಸರ್ವೆ ನಡೆಸಿದ್ದು, 4.11 ಎಕರೆ ಜಾಗ ಸಮಿತಿಗೆ ಒಳಪಟ್ಟಿದೆ ಎಂದು ದೃಢಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವನ್ನು ಸಮಿತಿಯ ವತಿಯಿಂದ 4.11 ಎಕರೆ ಜಾಗವನ್ನು ಖರೀದಿಸಲಾಗಿದ್ದು, ಯಾವದೇ ದಾನಿಗಳಿಂದ ಪಡೆದಿರುವದಿಲ್ಲ ಹಾಗೂ ಸಮಿತಿಯು ಕಳೆದ ವರ್ಷಗಿಂತ ಪ್ರಸ್ತುತ ಸಾಲಿನಲ್ಲಿ ಶೇ. 100 ರಷ್ಟು ಮಾರುಕಟ್ಟೆ ಶುಲ್ಕ ಸಂಗ್ರಹ ಮಾಡಲಾಗಿರುತ್ತದೆ. ಸಮಿತಿಯ ಪ್ರಾಂಗಣದಲ್ಲಿ ನಗರಸಭೆ ವತಿಯಿಂದ ರಸ್ತೆ ಕಾಮಗಾರಿಯನ್ನು ಆತುರತೆಯಿಂದ ಮಾಡಿ ತಡೆಗೋಡೆ ನಿರ್ಮಿಸಿದ್ದು, ಈ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಹದ್ದುಬಸ್ತು ಸರ್ವೆ ನಕಾಶೆಯನ್ನು ನ್ಯಾಯಾಲಯವು ಕೇಳಿರುವದರಿಂದ ಈಗಾಗಲೇ ಹದ್ದುಬಸ್ತು ಸರ್ವೆ ಮಾಡಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ನಗರಸಭೆ ಸದಸ್ಯರೊಬ್ಬರ ಮುಂದಾಳತ್ವದಲ್ಲಿ ಪ್ರಾಂಗಣದ ಜಾಗಕ್ಕೆ ಹೊಂದಿಕೊಂಡಂತೆ ಇರುವ ಹೋಂಸ್ಟೇ ನಡೆಸುತ್ತಿರುವ ಕೇವಲ 2 ಮನೆಗಳಿಗೆ ತಡೆಗೋಡೆ ನಿರ್ಮಿಸಲಾಗಿರುತ್ತದೆ.
ರಸ್ತೆ ಕಾಮಗಾರಿಯ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಕಾಮಗಾರಿಯನ್ನು ಮಾಡಲಾಗಿರುತ್ತದೆ ಹಾಗೂ ಪ್ರಾಂಗಣದಲ್ಲಿ ಹೋಂಸ್ಟೇಗೆ ಬರುವ ವಾಹನಗಳು, ಜನರು ಪ್ರಾಂಗಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಕಚೇರಿಗೆ ಬರುವಂತಹ ಸಾರ್ವಹನಿಕರಿಗೆ ಅಡಚಣೆ ಉಂಟಾಗುತ್ತಿರುವದರಿಂದ ಇದನ್ನು ಮನಗಂಡ ಆಡಳಿತ ಮಂಡಳಿಯು ಸಮಿತಿ ಮುಖ್ಯ ದ್ವಾರದ ಗೇಟ್ಗೆ ಬೀಗ ಹಾಕಿಸಲಾಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ ಎಪಿಎಂಸಿ ಪ್ರಾಂಗಣದಲ್ಲಿ ರೈತ ಸಂತೆ ಮಾಡಲು ಮುಚ್ಚಿದ ಹರಾಜುಕಟ್ಟೆ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ರೈತರಿಗೆ ಅನುಕೂಲವಾಗುವಂತೆ ಪ್ರಾಂಗಣದಲ್ಲಿ ಶೌಚಾಲಯ ಹೀಗೆ ಹಲವಾರು ಕಾಮಗಾರಿಗಳನ್ನು ಪ್ರಸ್ತುತ ಆಡಳಿತ ಮಂಡಳಿಯು ಕೈಗೊಂಡಿರುತ್ತದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇನಂಡ ಗಿರೀಶ್, ಸದಸ್ಯರುಗಳಾದ ಅನಂತೇಶ್ವರ, ಬೆಪ್ಪುರನ ಮೇದಪ್ಪ, ಅನಿಲ್ ಕುಮಾರ್ ಹಾಗೂ ಲೆಕ್ಕಾಧಿಕಾರಿ ರವಿ ಕುಮಾರ್ ಹಾಜರಿದ್ದರು.