ಮಡಿಕೇರಿ, ನ. 21: ಮಡಿಕೇರಿ ನಗರಸಭೆಯಿಂದ ನಡೆಯುತ್ತಿರುವ ನೂತನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅವರು, ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದಿಂದ ಕೆಲಸ ಪೂರ್ಣ ಗೊಳಿಸದಿದ್ದರೆ ಸರಕಾರದಿಂದ ಕ್ರಮಕ್ಕೆ ಕೋರುವದಾಗಿ ಎಚ್ಚರಿಸಿದ್ದಾರೆ.

ಇಂದು ಖಾಸಗಿ ಬಸ್ ನಿಲ್ದಾಣ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಅವರು, ಮೈಸೂರಿನ ಗುತ್ತಿಗೆದಾರ ಸಿದ್ದಪ್ಪ ಎಂಬವರನ್ನು ಮೊಬೈಲ್ ಕರೆಯೊಂದಿಗೆ ತರಾಟೆಗೆ ತೆಗೆದುಕೊಂಡರು. ಕಾಲಹರಣ ದೊಂದಿಗೆ ಕೇವಲ ಮೂರ್ನಾಲ್ಕು ಮಂದಿ ಕೆಲಸ ನಿರ್ವಹಿಸಲು ಬಿಟ್ಟಿರುವ ಬಗ್ಗೆ ಪ್ರಶ್ನಿಸಿದ ಮಾದಪ್ಪ, ಸಕಾಲದಲ್ಲಿ ಕೆಲಸ ಪೂರ್ಣಗೊಳಿಸದಿದ್ದರೆ ಹಣ ತಡೆಹಿಡಿಯುವದರೊಂದಿಗೆ ಗುತ್ತಿಗೆ ದಾರನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಉಸ್ತುವಾರಿ ಸಚಿವರ ಗಮನ ಸೆಳೆಯುವದಾಗಿ ಎಚ್ಚರಿಕೆ ನೀಡಿದರು.

ಮಳೆಗಾಲದಲ್ಲಿ ಕೊಡಗಿನ ಹವಮಾನದಿಂದ ಕೆಲಸ ವಿಳಂಬವಾಗಿದ್ದು, ಪ್ರಸಕ್ತ ವಾತಾವರಣದಲ್ಲಿಯೂ ಕೆಲಸಗಾರರನ್ನು ತೊಡಗಿಸದಿದ್ದರೆ ಇನ್ನಷ್ಟು ತಡವಾಗಲಿದೆ ಎಂದು ಬೊಟ್ಟು ಮಾಡಿದರು. ಈ ವೇಳೆ ಗುತ್ತಿಗೆದಾರ, ನಾಳೆಯಿಂದ ಹೆಚ್ಚಿನ ಕೆಲಸಗಾರರನ್ನು ತೊಡಗಿಸುವದ ರೊಂದಿಗೆ ಡಿಸೆಂಬರ್ 6 ರೊಳಗೆ ಸಾಧ್ಯವಾಗುವ ಕಾಮಗಾರಿ ಪೂರೈಸುವ ಭರವಸೆ ನೀಡಿದರು.

ನಗರಸಭೆ ಸಭೆ: ಬಸ್ ನಿಲ್ದಾಣದ ಕಾಮಗಾರಿಗೆ ನಗರಸಭೆ ಪೂರಕ ಒಪ್ಪಿಗೆ ಸೂಚಿಸಲು ಆಯುಕ್ತರಿಗೆ ತಾಕೀತು ಮಾಡಿದ ಪಕ್ಷಾಧ್ಯಕ್ಷರು, ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಆಗಿಂದಾಗ್ಗೆ ಗಮನ ಹರಿಸಲು ತಿಳಿ ಹೇಳಿದರು. ಈ ಸಂಬಂಧ ತಾ. 25 ರಂದು ನಗರಸಭೆಯ ತುರ್ತು ಸಭೆ ಕರೆದು ಅಗತ್ಯ ನಿರ್ಣಯ ಕೈಗೊಳ್ಳಲಾಗುವದು ಎಂದು ಆಯುಕ್ತೆ ಶುಭ ಭರವಸೆ ನೀಡಿದರು.

ಮಾರುಕಟ್ಟೆಗೆ ಭೇಟಿ: ಮಾರುಕಟ್ಟೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಶಿವು ಮಾದಪ್ಪ, ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ನಿರ್ದೇಶಿಸಿದರಲ್ಲದೆ, ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ರೂ. 1.4 ಕೋಟಿ ಹಣವನ್ನು ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸಿ ಬಿಡುಗಡೆಗೊಳಿಸಲು ಪ್ರಯತ್ನಿಸುವದಾಗಿ ಆಶ್ವಾಸನೆ ನೀಡಿದರು.

ಇಂದಿರಾ ಕ್ಯಾಂಟೀನ್: ಈಗಾಗಲೇ ನಗರಸಭೆಯು ಜಿಲ್ಲಾಸ್ಪತ್ರೆ ಕೆಳ ಭಾಗದಲ್ಲಿ, ಓಂಕಾರೇಶ್ವರ ದೇವಾಲಯ ಮಾರ್ಗ ಬಳಿ ಗುರುತಿಸಿರುವ ಇಂದಿರಾ ಕ್ಯಾಂಟೀನ್ ನಿವೇಶನ ಸೂಕ್ತವಲ್ಲವೆಂದು ಅಪಸ್ವರವೆತ್ತಿದ್ದು, ಅಂಚೆ ಕಚೇರಿ ಬಳಿಯ ‘ಹಾಪ್ ಕಾಮ್ಸ್’ ಜಾಗದಲ್ಲೇ ಪ್ರಾರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವೆಂದು ಒತ್ತಾಯಿಸುತ್ತಿರುª Àದಾಗಿ ಶಿವು ಮಾದಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಈ ಹಿನ್ನೆಯಲ್ಲಿ ಎಲ್ಲರಿಗೆ ಉಪಯೋಗವಾಗುವಂತೆ ಸೂಕ್ತ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಗತ್ಯ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಕೋರಲಾಗುವದು ಎಂದು ಅವರು ಮಾರ್ನುಡಿದರು.

ನಗರದ ಅಂಚೆ ಕಚೇರಿ ಎದುರು ಇರುವ ಹಾಪ್ ಕಾಮ್ಸ್‍ಗೆ ನೀಡಿದ ಸರಕಾರಿ ಜಾಗ ಇದಕ್ಕೆ ಸೂಕ್ತವಾಗಿದ್ದು, ಇದು ಸರಕಾರಕ್ಕೆ ಸೇರಿದ ಜಾಗವಾಗಿದೆ. ಈ ಜಾಗದ ಅಗತ್ಯವಿದ್ದಲ್ಲಿ ಮಂಜೂರಾತಿ ಆದೇಶವನ್ನು ಸರಕಾರ ಹಿಂದಕ್ಕೆ ಪಡೆಯಬಹುದಾಗಿದೆ ಎಂದು ಶಿವುಮಾದಪ್ಪ ತಿಳಿಸಿದರು. ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸುಮಾರು 3 ಸೆಂಟ್ ಜಾಗ ಬೇಕಾಗಿದ್ದು, ಈ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕೆನ್ನುವ ಚಿಂತನೆ ಹಿಂದೆ ಇತ್ತು. ಇದೇ ಕಾರಣಕ್ಕಾಗಿ ಹಾಪ್‍ಕಾಮ್ಸ್ ಸಂಸ್ಥೆ ತರಾತುರಿಯಲ್ಲಿ ಮಣ್ಣು ತೆಗೆದು ವಾಣಿಜ್ಯ ಸಂಕೀರ್ಣ ನಿರ್ಮಿಸಲು ತಯಾರಿ ನಡೆಸಿದೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಲ್ಲಿಯವರೆಗೆ ಹಾಪ್‍ಕಾಮ್ಸ್ ಸಂಸ್ಥೆಯ ಕಾಮಗಾರಿ ಯನ್ನು ತಡೆಹಿಡಿಯುವಂತೆ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿ ಕೊಳ್ಳುವದಾಗಿ ಶಿವುಮಾದಪ್ಪ ಸ್ಪಷ್ಟಪಡಿಸಿದರು.

ಈ ಸಂದರ್ಭ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ನಗರಸಭಾ ಸದಸ್ಯರಾದ ಜುಲೆಕಾಬಿ, ತಜಸುಂ, ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ಯತೀಶ್, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಪ್ರಮುಖರಾದ ಉಸ್ಮಾನ್, ಪ್ರಭುರೈ, ಹನೀಫ್ ಮತ್ತಿತರರು ಹಾಜರಿದ್ದರು.