ಸೋಮವಾರಪೇಟೆ,ನ.21: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗಾಂಜಾ ಮತ್ತು ಡ್ರಗ್ಸ್ ಮಾಫಿಯಾ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಇಲಾಖೆಯ ಡಿವೈಎಸ್‍ಪಿ ಮುರಳೀಧರ್ ಅವರನ್ನು ಆಗ್ರಹಿಸಿದರು.

ಪೊಲೀಸ್ ಇಲಾಖೆ ವತಿಯಿಂದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್, ಸೋಮವಾರಪೇಟೆಯಲ್ಲಿ ಗಾಂಜಾ-ಡ್ರಗ್ಸ್ ಮಾಫಿಯಾ ಬೇರೂರಿದ್ದು, ಯುವ ಜನಾಂಗ ವ್ಯಸನಕ್ಕೆ ಬಲಿಯಾಗುತ್ತಿದೆ. ಈ ಬಗ್ಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹೊರ ಭಾಗದಿಂದ ಪಟ್ಟಣಕ್ಕೆ ಗಾಂಜಾ ಸರಬರಾಜಾಗುತ್ತಿರುವ ಬಗ್ಗೆ ಸಂಶಯವಿದೆ. ಕೆಲ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಚಟಕ್ಕೆ ಬಲಿಯಾಗುತ್ತಿದ್ದಾರೆ. ಪೊಲೀಸ್ ಇಲಾಖೆಗೂ ಈ ಬಗ್ಗೆ ಮಾಹಿತಿ ಯಿದ್ದು, ಕೆಲ ಪ್ರಕರಣವನ್ನು ಭೇದಿಸಿದ್ದಾರೆ. ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಗಾಂಜಾ ಸೇರಿದಂತೆ ಡ್ರಗ್ಸ್ ಮಾರಾಟ, ಇನ್ನಿತರ ಸಮಾಜಘಾತುಕ ಕೃತ್ಯಗಳ ವಿರುದ್ಧ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಕಠಿಣ ಕ್ರಮ ಜರುಗಿಸು ತ್ತೇವೆ ಎಂದು ನೂತನ ಡಿವೈಎಸ್‍ಪಿ ಮುರಳೀಧರ್ ಹೇಳಿದರು.

ಸಭೆಯಲ್ಲಿದ್ದ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಮಧ್ಯೆ ಪ್ರವೇಶಿಸಿ, ಒಂದೆರಡು ಬಾರಿ ಗಾಂಜಾ ಸೇದುವವರನ್ನು ಬಂಧಿಸಲು ತೆರಳಿದಾಗ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ. ಚನ್ನಬಸಪ್ಪ ಸಭಾಂಗಣದ ಹಿಂದಿನ ರಸ್ತೆ, ಶತಮಾನೋತ್ಸವ ಭವನದ ಸಮೀಪ ಮತ್ತು ಕರ್ಕಳ್ಳಿ ಸ್ಮಶಾನದ ಬಳಿ ಕೆಲವರು ಗಾಂಜಾ ಸೇದುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆ ಕಾರ್ಯಾಚರಣೆ ನಡೆಸಲಾಗಿದೆ. ಇಂತಹ ಪ್ರಕರಣಗಳಿ ದ್ದರೆ ಇಲಾಖೆಗೆ ಮಾಹಿತಿ ನೀಡಿ ಎಂದರು.

ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಇದ್ದು, ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಬೇಕೆಂದು ಕರವೇ ನಗರ ಕಾರ್ಯದರ್ಶಿ ಕೆ.ಪಿ. ರವೀಶ್ ಸಭೆಯ ಗಮನ ಸೆಳೆದರು. ಇತ್ತೀಚೆಗೆ ಪಟ್ಟಣ ದಲ್ಲಿ ವಾಹನಗಳು ಅಧಿಕಗೊಂಡಿರುವ ಹಿನ್ನೆಲೆ ನಿಲುಗಡೆ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಡಿವೈಎಸ್‍ಪಿ ತಿಳಿಸಿದರು.

ಪಟ್ಟಣದ ಕೆಲ ಆಟೋ ಚಾಲಕರುಗಳಿಂದಾಗಿಯೇ ಸಂಚಾರ ವ್ಯವಸ್ಥೆ ಹಾಳಾಗುತ್ತಿದೆ. ಆಟೋದವರೇ ತಮ್ಮ ವಾಹನಗಳನ್ನು ಸರಿಯಾಗಿ ನಿಲ್ಲಿಸುತ್ತಿಲ್ಲ ಎಂದು ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ ಹೇಳಿದರು. ಆಟೋ ಮಾತ್ರವಲ್ಲ ಕೆಲ ಕಾರಿನವರೂ ಸಹ ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸುತ್ತಿದ್ದಾರೆ ಎಂದು ರವೀಶ್ ಹೇಳಿದರು.

ನೂತನ ಆಟೋಗಳಿಗೆ ಪರ್ಮಿಟ್ ನೀಡುವದನ್ನು ಸದ್ಯಕ್ಕೆ ತಡೆಹಿಡಿಯುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ವಾರಕ್ಕೆ ಎರಡರಂತೆ ನೂತನ ಆಟೋಗಳು ಬರುತ್ತಿದ್ದು, ಸ್ಥಳಾವಕಾಶದ ಸಮಸ್ಯೆ ಎದುರಾಗಿದೆ ಎಂದು ಆಟೋ ಯೂನಿಯನ್ ಅಧ್ಯಕ್ಷ ಮೋಹನ್ ಹೇಳಿದರು.

ಅಪ್ರಾಪ್ತ ಮಕ್ಕಳು ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದಾರೆ. ಈ ಬಗ್ಗೆ ಪೊಲಿಸರು ಕ್ರಮ ಕೈಗೊಳ್ಳಬೇಕು ಎಂದು ನಾಗೇಶ್ ಸಭೆಯ ಗಮನ ಸೆಳೆದರು. ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಮಕ್ಕಳ ಪೋಷಕರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಡಿವೈಎಸ್‍ಪಿ ಅವರು ಠಾಣಾಧಿಕಾರಿಗೆ ಸೂಚಿಸಿದರು.

ಪಟ್ಟಣದಲ್ಲಿ ನಾಲ್ಕೈದು ಮಂದಿಯ ತಂಡ ತಾವು ಮಾನವ ಹಕ್ಕುಗಳ ರಕ್ಷಣಾ ವೇದಿಕೆಯವರು ಎಂದು ಹೇಳಿಕೊಂಡು ಕೆಲವರನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಮಳ್ತೆಯಲ್ಲಿನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ ಇಲಾಖೆಯನ್ನು ಒತ್ತಾಯಿಸಿದರು.

ಈ ಬಗ್ಗೆ ದೂರು ಬಂದಲ್ಲಿ ಕ್ರಮ ವಹಿಸಲಾಗುವದು ಎಂದು ಠಾಣಾಧಿಕಾರಿ ತಿಳಿಸಿದರು. ಆನೆಕೆರೆ ಉದ್ಯಾನವನದ ಬಳಿ ಕೆಲವರು ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಇಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲು ಕ್ರಮವಹಿಸಬೇಕು. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಮಾಡಬೇಕು ಎಂದು ಪ.ಪಂ. ಸದಸ್ಯೆ ಲೀಲಾ ನಿರ್ವಾಣಿ ಹೇಳಿದರು. ಪ.ಪಂ. ನಿಂದಲೇ ಸಿ.ಸಿ. ಕ್ಯಾಮೆರಾ ಅಳವಡಿ ಸುವ ಬಗ್ಗೆಯೂ ಕ್ರಮ ಕೈಗೊಳ್ಳಿ ಎಂದು ಡಿವೈಎಸ್‍ಪಿ ಮುರಳೀಧರ್ ಹೇಳಿದರು.

ಪಟ್ಟಣದ ಲಾಡ್ಜ್‍ಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಲಾಡ್ಜ್‍ಗಳಲ್ಲಿ ಉಳಿಯುವ ಮತ್ತು ಹೊರ ಹೋಗುವವರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರ ಬೇಕು. ಈ ಬಗ್ಗೆ ಮಾಲೀಕರುಗಳಿಗೆ ಸೂಚಿಸಬೇಕೆಂದು ಡಿವೈಎಸ್‍ಪಿ ಅವರು, ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಕಾಫಿ, ಕರಿಮೆಣಸು, ಸಿಮೆಂಟ್ ತುಂಬಿದ ಲಾರಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿಕೊಂಡು ಲೋಡ್-ಅನ್‍ಲೋಡ್ ಮಾಡಲಾಗುತ್ತಿದೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಪ.ಪಂ. ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ಸಭೆಯ ಗಮನ ಸೆಳೆದರು. ವರ್ಕ್‍ಶಾಪ್ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಕೆಲಸ ಮಾಡಲು ಅಸಾಧ್ಯವಾಗಿದೆ ಎಂದು ವರ್ಕ್‍ಶಾಪ್ ಕೆಲಸಗಾರರ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದರು.

ಮಡಿಕೇರಿ ರಸ್ತೆಯಿಂದ ಮಾನಸ ಸಭಾಂಗಣದ ಮುಂಭಾಗದ ರಸ್ತೆಯನ್ನು ಸೋಮವಾರದಂದು ಏಕಮುಖ ಸಂಚಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮಸಗೋಡು ಸುರೇಶ್ ಸಲಹೆ ನೀಡಿದರು. ಪ್ರತಿ 2 ತಿಂಗಳಿಗೊಮ್ಮೆ ಸಾರ್ವಜನಿಕ ಸಂಪರ್ಕ ಸಭೆ ನಡೆಸಲು ಕ್ರಮವಹಿಸ ಬೇಕೆಂಬ ಸಲಹೆ ಸಭೆಯಲ್ಲಿ ವ್ಯಕ್ತಗೊಂಡಿತು.

ಸಭೆಯಲ್ಲಿ ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್, ವಿವಿಧ ಸಂಘಟನೆಗಳ ಪ್ರಮುಖರಾದ ಹೆಚ್.ಕೆ.ಗಂಗಾಧರ್, ಹೊನ್ನಪ್ಪ, ಸುರೇಶ್ ಶೆಟ್ಟಿ, ಸಿ.ಡಿ. ನೆಹರು, ಹಸನಬ್ಬ, ಬಾಲಕೃಷ್ಣ, ಕಿಬ್ಬೆಟ್ಟ ಆನಂದ್, ಐಗೂರು ಮಣಿ, ಜಗನ್ನಾಥ್, ರುಬೀನಾ ಎಂ.ಎ. ಸೇರಿದಂತೆ ಇತರರು ಉಪಸ್ಥಿತರಿದ್ದರು.