ಮಡಿಕೇರಿ, ನ. 21: ಚಲನಚಿತ್ರೋತ್ಸವ ಸಪ್ತಾಹದ ಪ್ರಯುಕ್ತ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಮತ್ತು ಪ್ರಾದೇಶಿಕ ಭಾಷೆ ಚಲನಚಿತ್ರ ಗಳನ್ನು ಪ್ರದರ್ಶನ ಮಾಡುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಡೆದ ತುಳು ಚಲನಚಿತ್ರ ‘ಮದಿಪು’ ಚಿತ್ರವನ್ನು ಪರಿಗಣಿಸಿ ಪ್ರದರ್ಶನಕ್ಕೆ ಆಯ್ಕೆ ಮಾಡಿರುವದು ಸ್ವಾಗತಾರ್ಹವಾಗಿದೆ ಎಂದು ತುಳುವೆರ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ತಿಳಿಸಿದ್ದಾರೆ.

ತುಳು ಬಾಷೆಯ ಬೆಳವಣಿಗೆಗೆ ತುಳು ಚಲನಚಿತ್ರಗಳು ಹೆಚ್ಚು ಸಹಕಾರಿಯಾಗಿದ್ದು, ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ತುಳು ಭಾಷಿಕರು ಇರುವದರಿಂದ ಹೆಚ್ಚಿನ ಸಂಖ್ಯೆಯ ತುಳು ಚಲನಚಿತ್ರಗಳು ಪ್ರದರ್ಶನ ಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಾದೇಶಿಕ ಭಾಷಾ ಚಿತ್ರ ವಿಭಾಗದಲ್ಲಿ ತುಳು ಚಿತ್ರ ‘ಮದಿಪು’ ತಾ. 20 ರಂದು ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳಲಿದ್ದು, ತುಳು ಭಾಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಮತ್ತು ಈ ನೆಲದ ಪ್ರಾದೇಶಿಕ ಭಾಷೆಯಲ್ಲೊಂದಾದ ಕೊಡವ ಭಾಷಾ ಚಲನಚಿತ್ರಕ್ಕೂ ಪ್ರದರ್ಶನದ ಅವಕಾಶ ಕಲ್ಪಿಸಿ ಕೊಡುವಂತಾಗಬೇಕೆಂದು ಪಿ. ಎಂ. ರವಿ ತಿಳಿಸಿದ್ದಾರೆ.