ಸೋಮವಾರಪೇಟೆ, ನ. 21: ಹಿಂದೂಗಳು ತಮ್ಮ ಮನೆಯಲ್ಲಿ ವಿವಿಧ ದೇವರುಗಳ ಭಾವಚಿತ್ರ, ವಿಗ್ರಹಗಳನ್ನು ಪೂಜಿಸುವಂತೆ ಭಾರತ ಮಾತೆಯ ಭಾವಚಿತ್ರವನ್ನೂ ಇಟ್ಟು ಪೂಜಿಸಬೇಕು, ದೇಶದ ಮೇಲಿನ ಭಕ್ತಿಯನ್ನು ಪ್ರತಿದಿನ ಉದ್ದೀಪನ ಗೊಳಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ಗುರುಪ್ರಸಾದ್ ಕರೆ ನೀಡಿದರು. ಸಮೀಪದ ಐಗೂರು ಗ್ರಾಮದ ಕೇಶವ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಐಗೂರು ಮಂಡಲದ ಆರ್ಎಸ್ಎಸ್ ಶಾಖಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿಸ್ವಾರ್ಥ ಸೇವೆಯ ಮನೋಭಾವ, ಸಾಮಾಜಿಕ ಕಳಕಳಿ, ದೇಶಭಕ್ತಿಯ ವ್ಯಕ್ತಿತ್ವವನ್ನು ತಯಾರು ಮಾಡುವ ಕಾರ್ಖಾನೆಯಾಗಿ ಆರ್ಎಸ್ಎಸ್ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಯಾವದೇ ಸಂದರ್ಭ ದಲ್ಲೂ ಜಾತೀಯತೆಗೆ ಅವಕಾಶ ನೀಡದೇ ಹಿಂದೂ ಸಮಾಜದ ಜಾಗೃತಿ, ಸಂಘಟನೆ, ರಕ್ಷಣೆಯ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಶಿಕ್ಷಕ ಪಿ.ಕೆ. ಸೋಮಯ್ಯ ಮಾತನಾಡಿ, ಸ್ವಚ್ಛ ಭಾರತ್ ಅಭಿಯಾನ ಪರಿಣಾಮಕಾರಿ ಯಾಗುವಂತೆ ಸ್ವಯಂ ಸೇವಕರು ಕೆಲಸ ಮಾಡಬೇಕು ಎಂದರು. ವೇದಿಕೆಯಲ್ಲಿ ಸಂಘದ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಉಪಸ್ಥಿತರಿದ್ದರು. ಸ್ವಯಂ ಸೇವಕರಾದ ಎಂ.ಎ. ಪ್ರಭಾಕರ್ ನಿರೂಪಿಸಿ, ಟಿ.ಆರ್. ವಿಜಯ ಸ್ವಾಗತಿಸಿ, ತೇಜ ವಂದಿಸಿದರು. ಸ್ವಯಂ ಸೇವಕರಿಂದ ವಿವಿಧ ಯೋಗಾಸನ, ನಿಯುದ್ಧ, ದಂಡ ಪ್ರಯೋಗ ಪ್ರದರ್ಶನ ನಡೆಯಿತು.