ಮಡಿಕೇರಿ, ನ. 21: ನಾಗರಹೊಳೆ ವಿಶ್ವವಿಖ್ಯಾತಿ ಪಡೆದ ಹುಲಿ ಸಂರಕ್ಷಿತ ಪ್ರದೇಶ. ಇಲ್ಲಿ ಅನೇಕ ಬಗೆಯ ಸಸ್ಯಾಹಾರಿ- ಮಾಂಸಾಹಾರಿ ಪ್ರಾಣಿಗಳು, ಗಿಡಮೂಲಿಕೆ ಸಸ್ಯಗಳು ಇವೆ. ಈ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಿರೆಂದು ಕಲ್ಲಹಳ್ಳ ವಲಯದ ವಲಯ ಅರಣ್ಯಾಧಿಕಾರಿ ಶಿವರಾಂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಿಣ್ಣರ ವನದರ್ಶನದ ಅಂಗವಾಗಿ ನಾಗರಹೊಳೆ ಉದ್ಯಾನಕ್ಕೆ ಭೇಟಿ ನೀಡಿದ್ದ ಕೊಡಗಿನ ಬಾಳೆಲೆಯ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಲ್ಲಹಳ್ಳದ ಅರಣ್ಯ ಪ್ರದೇಶದಲ್ಲಿ ಅರಣ್ಯದ ಮಹತ್ವ ಕುರಿತು ಅವರು ಮಾಹಿತಿ ನೀಡಿದರು. ದೇಶದಲ್ಲೇ ಹುಲಿ ಸಂರಕ್ಷಣೆಗೆ ಪ್ರಶಸ್ತವಾದ ಸ್ಥಳವೆಂದರೆ ಅದು ನಾಗರಹೊಳೆ. ಇಲ್ಲಿ ಸುಮಾರು 92 ಹುಲಿಗಳಿವೆ ಎಂದರು.
ವಿವಿಧ ವನ್ಯಜೀವಿಗಳ ತಾಣ: ಇಲ್ಲಿ ತೇಗ, ಶ್ರೀಗಂಧ, ಬೀಟೆ, ಮತ್ತಿ, ಹೊನ್ನೆ, ಬಿದಿರು ಸೇರಿದಂತೆ ಅನೇಕ ಜಾತಿಯ ಮರಗಳಿವೆ. ಆನೆ, ಹುಲಿ, ಚಿರತೆ, ಚೆತರೆಬೆಕ್ಕು, ಕಪ್ಪುಚಿರತೆ, ಕರಡಿ, ಕಾಡೆಮ್ಮೆ, ಕಾಡುಕುರಿ, ಚೌಸಿಂಗ, ಚಿಪ್ಪುಹಂದಿ, ಮುಳ್ಳುಹಂದಿ, ನೀರು ನಾಯಿ, ಕಾಡುನಾಯಿ, ಮೊಸಳೆ, ಉಡ, ಜಿಂಕೆ, ಸಾರಂಗ, ನವಿಲು, ಕಾಡುಕೋಳಿ, ಲಂಗೂರ್ ಸೇರಿದಂತೆ ಅನೇಕ ಪಕ್ಷಿ ಪ್ರಬೇಧಗಳು ಇಲ್ಲಿವೆ. ಇಲ್ಲಿ ಪ್ರಾಣಿ- ಪಕ್ಷಿಗಳ ಆಹಾರ ಪದ್ಧತಿ ಸರಪಳಿ ಮಾದರಿಯಲ್ಲಿದ್ದು, ಒಂದಕ್ಕೊಂದು ಪೂರಕ ಸಹಕಾರ ದಿಂದ ಅರಣ್ಯ ಹಾಗೂ ವನ್ಯ ಜೀವಿಗಳ ಸಂಕುಲ ಸಮೃದ್ಧಿಯಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶವಾದ ಇಲ್ಲಿನ ನೈಸರ್ಗಿಕ ಸಂಪತ್ತು ಬೆಲೆ ಕಟ್ಟಲಾಗದ್ದು. ಮರಗಳ್ಳತನ, ಪ್ರಾಣಿಗಳ ಬೇಟೆಯಾಡುವದು ಅಪರಾಧ. ವಿದ್ಯಾರ್ಥಿಗಳಾದ ನೀವು ನಿಮ್ಮ ಪಕ್ಕದ ಅರಣ್ಯ ಸಿರಿಯ ಮಹತ್ವವನ್ನು ಅರಿಯಬೇಕು. ಕಾಡು ಪ್ರಾಣಿಗಳ ಸಂರಕ್ಷಣೆಗೆ ನಿಮ್ಮ ಕೊಡುಗೆ ನೀಡ ಬೇಕೆಂದು ಸೂಚಿಸಿದರು.
ಪ್ರಮಾಣ ವಚನ: ಯಾವದೇ ಕಾರಣಕ್ಕೂ ವನ್ಯಜೀವಿಯ ಮಾಂಸ ಭಕ್ಷಣೆ ಮಾಡುವದಿಲ್ಲ. ಅರಣ್ಯ ಸಂಪತ್ತನ್ನು ಹಾಳು ಮಾಡುವದಿಲ್ಲ. ನಾಳಿನ ಉಳಿವಿಗಾಗಿ ಅರಣ್ಯವನ್ನು ಸಂರಕ್ಷಿಸುತ್ತೇವೆಂದು ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಭೇಟಿ : ನಂತರ ನಾಗರಹೊಳೆ ವಲಯಕ್ಕೆ ಭೇಟಿಕೊಟ್ಟ ವಿದ್ಯಾರ್ಥಿಗಳು ಅಲ್ಲಿ ಪ್ರಕೃತಿ ನಡಿಗೆ ನಡೆಸಿದರು. ಆರ್ಎಫ್ಓ ಅರವಿಂದ್, ನ್ಯಾಚುರಲಿಸ್ಟ್ ಗೋಪಿ, ತರಬೇತಿ ನಿರತ ಆರ್ಎಫ್ಓ ರಾಜೇಶ್, ಪ್ರಶಾಂತ್ ಪರಿಸರ, ಅರಣ್ಯ ಹಾಗೂ ಪ್ರಾಣಿ - ಪಕ್ಷಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಂತರ ನಾಗರಹೊಳೆಯ ವೈವಿಧ್ಯತೆ ಬಗ್ಗೆ ಸಾಕ್ಷ್ಯಚಿತ್ರ ವೀಕ್ಷಿಸಿದರು.
ವಿದ್ಯಾರ್ಥಿಗಳಿಗೆ ವನದರ್ಶನ ಸಂಬಂಧಿತವಾಗಿ ಸ್ಥಳದಲ್ಲೇ ಪ್ರಬಂಧ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು. ಶಾಲಾ ಶಿಕ್ಷಕರಾದ ಡಿ.ಎನ್. ಸುಬ್ಬಯ್ಯ, ರಾಘವೇಂದ್ರ, ಚಂದ್ರಾವತಿ, ಅರಣ್ಯ ರಕ್ಷಕರಾದ ಸ್ವಾಮಿ, ಪ್ರವೀಣ್ ಹಾಜರಿದ್ದರು.